ನೊಳಂಬ ಲಿಂಗಾಯತ ಸಂಘದ ನಿರ್ದೇಶಕರಾಗಿ ಡಾ. ಡಿ.ಬಿ. ಗಂಗಪ್ಪ, ಸಿ.ಬಿ. ಈಶ್ವರಪ್ಪ ಆಯ್ಕೆ

ಮಲೇಬೆನ್ನೂರು, ಫೆ. 28 – ನೊಳಂಬ ಲಿಂಗಾಯತ ಸಂಘದ ಕೇಂದ್ರ ಸಮಿತಿಯ ನಿರ್ದೇಶಕರ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಿಂದ ಹೊನ್ನಾಳಿ ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ ಮತ್ತು ನಿವೃತ್ತ ಇಂಜಿನಿಯರ್‍ ಸಿ.ಬಿ. ಈಶ್ವರಪ್ಪ ಅವರು ಆಯ್ಕೆಯಾಗಿದ್ದಾರೆ.

ದಾವಣಗೆರೆ ಜಿಲ್ಲೆಯಿಂದ ಆಯ್ಕೆಯಾಗ ಬೇಕಿದ್ದ 2 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ದಾವಣಗೆರೆ ನಗರದ ಎಸ್‍.ಎಸ್‍.`ಬಿ’ ಬ್ಲಾಕ್‍ನ ಲ್ಲಿರುವ ಲಿಟಲ್ ಚಾಂಪ್ಸ್‍ ಗುರು ಕುಲಂ ಶಾಲೆ ಯಲ್ಲಿ ಚುನಾವಣೆ ನಡೆಯಿತು. 2 ಸ್ಥಾನಗಳಿಗೆ ಸ್ಪರ್ಧಿಸಿದ್ದ ಡಾ. ಡಿ.ಬಿ. ಗಂಗಪ್ಪ 338 ಮತ್ತು ಸಿ.ಬಿ. ಈಶ್ವರಪ್ಪ 241 ಮತಗಳನ್ನು ಪಡೆದು ಆಯ್ಕೆಯಾದರೆ, ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದ ಹೊನ್ನಾಳಿ ತಾಲ್ಲೂಕಿನ ಮಾದೇನಹಳ್ಳಿಯ ರುದ್ರೇಗೌಡ 195 ಮತ್ತು ಹರಿಹರ ತಾಲ್ಲೂಕಿನ ಜಿ.ಬೇವಿನಹಳ್ಳಿಯ ಬಿ.ಕೆ. ಮಹೇಶ್ವರಪ್ಪ ಅವರು 144 ಮತಗಳನ್ನು ಪಡೆದು ಪರಾಭವಗೊಂಡರು.

ಕೇಂದ್ರ ಸಮಿತಿಗೆ ಕಳೆದ 3 ವರ್ಷಗಳಿಂದ ನಾಮ ನಿರ್ದೇಶಿತ ನಿರ್ದೇಶಕರಾಗಿ ಕಾರ್ಯನಿರ್ವ ಹಿಸಿದ್ದ ಜಿಗಳಿಯ ಎನ್‍.ಆರ್‍. ಇಂದೂಧರ್‌ ಅವರು ಇದೇ ಮೊದಲ ಬಾರಿಗೆ ಆಯ್ಕೆ ಬಯಸಿ ಸ್ಪರ್ಧಿಸಿ, 186 ಮತಗಳನ್ನು ಪಡೆದು ವಿಫಲರಾ ದರು. ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ನೊಳಂಬ ಲಿಂಗಾಯತ ಸಂಘ ಸ್ಥಾಪನೆಯಾಗಿ ಸುಮಾರು 40 ವರ್ಷಗಳನ್ನು ಪೂರೈಸಿದ್ದು, ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದೆ ಎನ್ನಲಾಗಿದೆ.

ಕೇಂದ್ರ ಸಮಿತಿ ಒಟ್ಟು 15 ನಿರ್ದೇಶಕರನ್ನು ಹೊಂದಿದೆ, ತರೀಕೆರೆ ಮಾಜಿ ಶಾಸಕ ಎಸ್.ಎಂ.ನಾಗರಾಜ್ ಅವರು ಈಗಾಗಲೇ ಅವಿರೋಧ ವಾಗಿ ಆಯ್ಕೆಯಾಗಿದ್ದು, ದಾವಣಗೆರೆ ಜಿಲ್ಲೆಯಿಂದ ಮಾಜಿ ಶಾಸಕ ಡಾ. ಡಿ.ಬಿ ಗಂಗಪ್ಪ ಮತ್ತು ನಿವೃತ್ತ ಇಂಜಿನಿಯರ್ ಸಿ.ಬಿ. ಈಶ್ವರಪ್ಪ ಇದೇ ಮೊದಲ ಬಾರಿಗೆ ಸಂಘದ ಕೇಂದ್ರಸಮಿತಿ ಪ್ರವೇಶಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 825 ಮತದಾರರಿದ್ದು ಅದರಲ್ಲಿ 601 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಒಂದು ಮತ ತಿರಸ್ಕೃತಗೊಂಡಿತು. ಒಬ್ಬ ಮತದಾರ ಇಬ್ಬರಿಗೆ ಮತ ಹಾಕುವ ಅವಕಾಶ ಇತ್ತು. ಉಪನ್ಯಾಸಕ ಸಿದ್ದಯ್ಯ ಚುನಾವಣಾಧಿಕಾರಿಯಾಗಿದ್ದರು. ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದರಿಂದ ಬಹಳ ಮಹತ್ವ ಪಡೆದುಕೊಂಡಿತ್ತು, ಕಳೆದ ಒಂದು ವಾರದಿಂದ ಅಭ್ಯರ್ಥಿಗಳು ಗೆಲುವಿಗಾಗಿ ತೀವ್ರ ಪ್ರಚಾರ ನಡೆಸಿದ್ದರು.

ವಿಜಯೋತ್ಸವ: ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಡಾ. ಗಂಗಪ್ಪ ಮತ್ತು ಈಶ್ವರಪ್ಪ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಡಾ. ಟಿ.ಬಸವರಾಜ್, ಹಿಂಡಸಘಟ್ಟಿ ಮುರುಗೇಶ್, ಹಳ್ಳಿ ಹಾಳ್ ಪರಮೇಶ್ವರಪ್ಪ, ವಾಸನ ಬಸವರಾಜಪ್ಪ, ಜಿಗಳಿಯ ಗೌಡ್ರು ಬಸವರಾಜಪ್ಪ, ಕೊಕ್ಕನೂರು ಆಂಜನೇಯ ಪಾಟೀಲ್ ಹಾಗೂ ಮಾದೇನಹಳ್ಳಿ  ಲೋಹಿತ್‍ ಮತ್ತಿತರರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.

error: Content is protected !!