ವರ್ತುಲ ರಸ್ತೆಗಾಗಿ ಮನೆ, ನಿವೇಶನ ಕಳೆದುಕೊಂಡ ನಿರಾಶ್ರಿತರಿಗೆ ಪರಿಹಾರ ಕೊಡಿ

ದಾವಣಗೆರೆ, ಫೆ.28- ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣ ಮಾಡುವಾಗ ಮನೆ, ನಿವೇಶನ ಕಳೆದುಕೊಂಡ ವರಿಗೆ ಕೂಡಲೇ ಪರಿಹಾರ ನೀಡುವಂತೆ ಸಂತ್ರಸ್ತ ವಿ.ಜಿ. ಹನುಮಾನ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

120 ಅಡಿ ವರ್ತುಲ (ರಿಂಗ್‌) ರಸ್ತೆ ನಿರ್ಮಾಣಕ್ಕಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ 1998 ರಲ್ಲಿ ನೋಟಿಸ್‌ ನೀಡಿ, ಮನೆಗಳನ್ನು ಧ್ವಂಸಗೊಳಿಸಿ, ನಿವೇಶನಗಳನ್ನು ವಶಕ್ಕೆ ಪಡೆದು ರಸ್ತೆ ನಿರ್ಮಿಸಿದೆ. ಇದುವರೆಗೂ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಎಂದು ಅಳಲು ತೋಡಿಕೊಂಡು, ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾದ ಸಂದರ್ಭದಲ್ಲಿ 15 ದಿನಗಳಲ್ಲೇ ಪರಿಹಾರ ನೀಡಲು ಭರವಸೆ ನೀಡಿದ್ದರು. ಆದರೂ ಚೆಕಾರ ಎತ್ತಿಲ್ಲ. 2004 ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದೆವು ಎಂದು ತಿಳಿಸಿದರು.

ನ್ಯಾಯಾಲಯ ಕೂಡ 6 ತಿಂಗಳ ಒಳಗೆ ಪರಿಹಾರ ನೀಡುವಂತೆ ಸೂಚನೆ ನೀಡಿತ್ತು. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರತಿ ಚದುರಡಿಗೆ ಕೇವಲ 12 ರೂ ಗಳು ನಿಗದಿ ಮಾಡಿ ಪರಿಹಾರಕ್ಕೆ ಮುಂದಾಗಿತ್ತು. ಆಗ ಸಂತ್ರಸ್ತರು ಹೆಚ್ಚಿನ ಪರಿಹಾರಕ್ಕಾಗಿ ಪುನಃ ನ್ಯಾಯಾಲಯದ ಮೊರೆ ಹೋಗಿ 150 ರೂ ಗಳ ಪರಿಹಾರ ನೀಡಲು ಸೂಚನೆ ನೀಡಿತ್ತು.

2016 ರಲ್ಲಿ ದೂಡಾ ಕಡಿಮೆ ದರ ನಿಗದಿ ಮಾಡು ವಂತೆ ಕೋರಿ ನ್ಯಾಯಾಲಯದ ಮೊರೆಹೋಗಿದೆ. 21 ವರ್ಷಗಳಾದರೂ ಪರಿಹಾರ ನೀಡಿಲ್ಲ. ಈಗಲಾದರೂ 150 ರೂ ನಂತೆ ಪರಿಹಾರ ನೀಡಲು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಎಸ್‌. ರಾಮಶೆಟ್ಟಿ ಶಾರದಮ್ಮ, ಪುಂಡಲೀಕ, ಕರಮಡಿ ಶಾಂತಪ್ಪ, ಕೊಟ್ರಮ್ಮ ಮತ್ತಿತರರು ಇದ್ದರು.

error: Content is protected !!