ತಿಂಗಳ ಅಂಗಳ ಸಾಹಿತ್ಯ – ಸಾಂಸ್ಕೃತಿಕ ಬಳಗದ ವತಿಯಿಂದ ನಿನ್ನೆ ಆಯೋಜಿಸಲಾಗಿದ್ದ ಆನ್‌ಲೈನ್ ಸಾಹಿತ್ಯ ಸಂಭ್ರಮದಲ್ಲಿ ಡಾ. ನಿಂಗಪ್ಪ ಮುದೇನೂರು ಕರೆ
ದಾವಣಗೆರೆ, ಜು.18- ವಿವೇಕವನ್ನು ಜಾಗೃತಿಗೊಳಿಸಿ ಪ್ರಜ್ಞಾಪೂರ್ವಕ ಬದುಕನ್ನು ಕಟ್ಟಿಕೊಡುವುದೇ ನಿಜವಾದ ಸಾಹಿತ್ಯ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೂ ಆದ ಸಾಹಿತಿ ಡಾ. ನಿಂಗಪ್ಪ ಮುದೇನೂರು ವ್ಯಾಖ್ಯಾನಿಸಿದರು.
ತಿಂಗಳ ಅಂಗಳ ಸಾಹಿತ್ಯ – ಸಾಂಸ್ಕೃತಿಕ ಬಳಗದ ವತಿಯಿಂದ ನಿನ್ನೆ ಆಯೋಜಿಸಲಾಗಿದ್ದ ಆನ್‌ಲೈನ್ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ತಮ್ಮ ಸ್ವರಚಿತ ಕವನದ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸನ್ನು ಅರಳಿಸಿ, ಬದುಕಿನ ವಿಕಸನಕ್ಕೆ ಪ್ರೇರೇಪಣೆ ನೀಡುವುದೇ ಸಾಹಿತ್ಯದ ಮೂಲ ಉದ್ದೇಶ ಎಂದು ಅಭಿಪ್ರಾಯಿಸಿದರು.
ನಮ್ಮ ಜಾನಪದ, ವಚನ, ದಾಸ ಸಾಹಿತ್ಯದಂತಹ ಪ್ರಮುಖ ಪ್ರಕಾರಗಳು ಇಂದಿಗೂ ಜೀವಂತವಾಗಿರುವುದಕ್ಕೆ ಕಾರಣ, ಅದರೊಳಗಿನ ಮಾನವೀಯ ಸೆಲೆಯೇ ಆಗಿದೆ. ಅಂತಃಕರಣವನ್ನು ಮುಟ್ಟುವ ಸಾಹಿತ್ಯ ಮಾತ್ರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆಯುತ್ತದೆ. ಆ ಸಾಮಾಜಿಕ ಪ್ರಜ್ಞೆಯ ನೆಲೆಗಟ್ಟುನಲ್ಲಿ ಸಾಹಿತ್ಯ ಸೃಜಿಸುವ ಇಂಗಿತ ರಚನೆಕಾರರಿಗೆ ಅವಶ್ಯ ಎಂದು ಅವರು ನುಡಿದರು.
ಕಾವ್ಯದ ನೆಲೆಗಳು ವಿಷಯ ಕುರಿತು ಮಾತನಾಡಿದ ಸಾಹಿತಿ ಡಾ. ಆನಂದ್ ಋಗ್ವೇದಿ ಅವರು, ಮಾನವೀಯ ಪ್ರೀತಿ ಮತ್ತು ಅದರ ಅವಕಾಶದ ಹುಡುಕಾಟದಲ್ಲಿ ಕಾವ್ಯದ ನೆಲೆ ಅಡಗಿದೆ. ಆ ಹುಡುಕಾಟದ ತವಕ ಇದ್ದವರಿಂದ ಮಾತ್ರ ಒಳನೋಟದ ಸಾಹಿತ್ಯ ರಚನೆಯನ್ನು ನಿರೀಕ್ಷಿಸಬಹುದು ಎಂದರು.
ಆನ್‌ಲೈನ್ ಕಾರ್ಯಕ್ರಮವನ್ನು ನಿರ್ವಹಿಸಿದ ಬಳಗದ ಸಂಚಾಲಕ ಗಂಗಾಧರ ಬಿ.ಎಲ್. ನಿಟ್ಟೂರ್, ಮನೆ – ಮನೆಯಂಗಳದಲ್ಲಿ ಹಬ್ಬದ ವಾತಾವರಣವನ್ನು ಕಟ್ಟಿಕೊಟ್ಟಿದ್ದ ತಿಂಗಳ ಅಂಗಳದ ಕಾವ್ಯ ಮಲ್ಲಿಗೆ ಆನ್‌ಲೈನ್ ಮೂಲಕವೂ ಮನದಂಗಳ ತಲುಪಿ ಸುವಾಸನೆ ಬೀರಲು ಅಣಿಯಾಗಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಸಾಹಿತ್ಯ ವಲಯ ನೀಡುತ್ತಿರುವ ಬೆಂಬಲ ಮತ್ತು ಹಿರಿಯ ಸಾಹಿತಿಗಳ ಮಾರ್ಗದರ್ಶನ ಅಪಾರ ಎಂದು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಲೇಖಕಿ ಶ್ರೀಮತಿ ಮಲ್ಲಮ್ಮ ನಾಗರಾಜ್, ಸಾಹಿತ್ಯ ಹರಿಯುವ ನೀರಿನಂತೆ. ಆ ನೀರು ಸದಾ ತಿಳಿಯಾಗಿ, ಸ್ವಚ್ಛ, ಶುದ್ಧವಾಗಿ ಹರಿಯುತ್ತಲೇ ಇರಬೇಕು. ಆಗ ಸಮಾಜ ಹಸಿರಾಗಿ, ಸುಂದರವಾಗಿರಲು ಸಾಧ್ಯ. ಆ ದಿಸೆಯಲ್ಲಿ ಹಿರಿಯರು ಬೆನ್ನು ತಟ್ಟಿದಾಗ ಯುವಪೀಳಿಗೆ ಮೂಲಕ ಆ ಪ್ರಕ್ರಿಯೆ ನಿತ್ಯ, ನಿರಂತರ ಮುಂದುವರಿಯು ತ್ತದೆ. ತಿಂಗಳ ಅಂಗಳ ಬಳಗದ ಕಾರ್ಯ ಇದಕ್ಕೆ ಮಾದರಿ ಎಂದು ಶ್ಲ್ಯಾಘಿಸಿದರು.
ಸಾಹಿತಿ ಮಹಾಂತೇಶ್ ಬಿ. ನಿಟ್ಟೂರು ಆಶಯ ನುಡಿಗಳನ್ನಾಡಿದರು. ಜೀವರಾಜ್ ಛತ್ರದ ಬ್ಯಾಡಗಿ, ಸಂತೆಬೆನ್ನೂರು ಫೈಜ್ನಟ್ರಾಜ್, ರಾಜೇಂದ್ರ ಪ್ರಸಾದ್ ನೀಲಗುಂದ, ಶ್ರೀಮತಿ ಅನ್ನಪೂರ್ಣ ಪಾಟೀಲ್, ಮಂಜುನಾಥ್ ಚಿತ್ರದುರ್ಗ ಅವರು ಕವನ ವಾಚಿಸಿದರು.
ಹಿರಿಯ ಕವಯತ್ರಿಯರಾದ ಶ್ರೀಮತಿ ಅರುಂಧತಿ ರಮೇಶ್, ಶ್ರೀಮತಿ ಸುಭಾಷಿಣಿ ಮಂಜುನಾಥ್, ಶ್ರೀಮತಿ ಜಯಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.