ಲಕ್ಷ ಡೋಸ್ ಕೋವಿಡ್ ಲಸಿಕೆ ಸರಬರಾಜಿಗೆ ಸಿದ್ದೇಶ್ವರ ಮನವಿ

ಲಕ್ಷ ಡೋಸ್ ಕೋವಿಡ್ ಲಸಿಕೆ ಸರಬರಾಜಿಗೆ ಸಿದ್ದೇಶ್ವರ ಮನವಿ - Janathavaniದಾವಣಗೆರೆ, ಏ.24-ಜಿಲ್ಲೆಗೆ ಶೀಘ್ರವಾಗಿ 1 ಲಕ್ಷ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಗಳನ್ನು ಪೂರೈಕೆ ಮಾಡಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಡಿ ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಕೋವಿಡ್ ಎರಡನೇ ಅಲೆ ಪ್ರಾರಂಭವಾದ ಮೇಲೆ ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಲು ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ.  ದಾವಣಗೆರೆ ಜಿಲ್ಲೆಗೆ ಈಗ ಸರಬರಾಜು ಮಾಡುತ್ತಿರುವ ಕೋವಿಡ್ ಲಸಿಕೆಗಳು ಸಾಲುತ್ತಿಲ್ಲ. ಕಳೆದ ಮೂರು ದಿನಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಲಸಿಕೆಗಳು ಲಭ್ಯವಿಲ್ಲ ಎಂಬ ವಿಷಯದ ಬಗ್ಗೆ ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಿಲ್ಲೆಗೆ ದಿನಾಂಕ ಏ.23ರಂದು ಕೇವಲ 7000 ಡೋಸ್ ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗಿದೆ ಮತ್ತು ಈಗಾಗಲೇ ಖಾಲಿಯಾಗಿವೆ. ಸಾಕಷ್ಟು ಜನರು ಆಸ್ಪತ್ರೆಗಳಿಗೆ ಆಗಮಿಸಿ ಲಸಿಕೆ ಸಿಗದೇ ಇರುವ ಕಾರಣಕ್ಕೆ ವಾಪಾಸ್‌ ಹೋಗುತ್ತಿದ್ದಾರೆ ಮತ್ತು ಲಸಿಕೆಗಾಗಿ ಹಾತೊರೆಯುತ್ತಿದ್ದಾರೆ. ಲಸಿಕೆ ಸಿಗದೇ ಇರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ  ಶೀಘ್ರ ಲಕ್ಷ ಡೋಸ್ ಲಸಿಕೆ ಪೂರೈಕೆಗೆ ನಿರ್ದೇಶಿಸುವಂತೆ ಮನವಿ ಮಾಡಿದ್ದಾರೆ

ರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷ  ಜೆ.ಪಿ.ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ರವರಿಗೂ ಕೂಡ ಮೇಲ್ ಸಂದೇಶ ಕಳುಹಿಸಿರುವ ಸಂಸದರು, ತುರ್ತಾಗಿ  ಲಸಿಕೆಗಳನ್ನು ಪೂರೈಕೆ ಮಾಡಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿಕೊಂಡಿದ್ದಾರೆ.

error: Content is protected !!