ಗ್ರಾ.ಪಂ. ಸಭೆಯಲ್ಲಿ ಗಂಡಂದಿರ ಹಸ್ತಕ್ಷೇಪ ಬೇಡ

ರಾಣೇಬೆನ್ನೂರು : ಚಿಂತನ ಮಂಥನದಲ್ಲಿ ಸದಸ್ಯೆ ಭಾರತಿ ಕರ್ಜಗಿ

ರಾಣೇಬೆನ್ನೂರು, ಫೆ.26-  ಮೀಸಲಾತಿಯಿಂದಾಗಿ ಗ್ರಾಮ ಪಂಚಾಯ್ತಿಗಳಿಗೆ ಅರ್ಧದಷ್ಟು ಮಹಿಳೆಯರು  ಆಯ್ಕೆಯಾಗಿದ್ದೇವೆ. ನಮ್ಮದೇ ಶಕ್ತಿ ಹಾಗೂ ಕನಸುಗಳೊಂದಿಗೆ ಗ್ರಾಮಗಳನ್ನು ಅಭಿವೃದ್ಧಿ ಮಾಡೋಣ. ಇಲ್ಲಿ ನಮ್ಮ ಗಂಡಂದಿರ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದು ಬೇಡ ಎಂದು ಚಳಗೇರಿ ಗ್ರಾ.ಪಂ. ಸದಸ್ಯೆ ಭಾರತಿ ಕರ್ಜಗಿ ತಮ್ಮ ಅಭಿಪ್ರಾಯವನ್ನು ಬಲವಾಗಿ ವ್ಯಕ್ತಪಡಿಸಿದರು.

 ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಮೂಲಕ ಅಭಿವೃದ್ಧಿ ಕೈಗೊಳ್ಳಲು   ಮೂರು ಹಂತದ ಜನ ಪ್ರತಿನಿಧಿಗಳು, ಅಧಿಕಾರಿಗಳ ಹಾಗೂ   ಜಿ.ಪಂ. ಸಿಇಒ ಅವರೊಂದಿಗಿನ ಚಿಂತನ-ಮಂಥನ-ಸಂವಾದ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು ಈಗ ಎರಡನೇ ಬಾರಿ ಸದಸ್ಯಳಾಗಿ ದ್ದೇನೆ. ನನ್ನ ಗಂಡನನ್ನು ನನ್ನ ಪರವಾಗಿ ಮತಯಾಚಿಸಲೂ ಸಹ ನಾನು ಕರೆಯಲಿಲ್ಲ. ಒಂದು ಮನೆತನದ ಜವಾಬ್ದಾರಿಯನ್ನು ನಿಭಾಯಿಸುವ ಮಹಿಳೆಗೆ ವಾರ್ಡಿನ, ಗ್ರಾಮದ ಜವಾಬ್ದಾರಿ  ಕಷ್ಟವಾಗಲಾರದು. ಅವಳಿಗೆ ಸ್ವಾತಂತ್ರ್ಯ ಬೇಕು ಎಂಬ ಭಾರತಿ ಅವರ ಮಾತುಗಳಿಗೆ,  ಜಿ.ಪಂ. ಸದಸ್ಯೆ ಮಂಗಳಗೌರಿ ಪೂಜಾರ ದನಿಗೂಡಿಸಿದರು.

ದೇಶದ ಪ್ರಧಾನಮಂತ್ರಿಯಷ್ಟೇ ಅಧಿಕಾರ ಹೊಂದಿರುವ ಗ್ರಾ.ಪಂ. ಅಧ್ಯಕ್ಷರು ಪಂಚಾಯ್ತಿಗೆ ಬರುವ ಅನುದಾನ,  ನೀರು, ಬೆಳಕು, ಸ್ವಚ್ಛತೆ, ಶಿಕ್ಷಣ ಹೀಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲು ಅವಶ್ಯ ಮಾಹಿತಿ ಪಡೆದು ಕಾರ್ಯೋನ್ಮುಖರಾಗಬೇಕು. ಅಭಿವೃದ್ಧಿಯಲ್ಲಿ ಯಾವುದೇ ಭೇದವಿಟ್ಟುಕೊಳ್ಳಬಾರದು ಎಂದು ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ರೋಶನ್ ಮಾತನಾಡಿ, ಗ್ರಾ.ಪಂ., ತಾ.ಪಂ. ಹಾಗೂ  ಜಿ.ಪಂ.ಅಧಿಕಾರಿಗಳ ಮಟ್ಟದಲ್ಲಿ ಪ್ರತಿದಿನ ಸಂಪರ್ಕವಿದ್ದು ಆಡಳಿತಾತ್ಮಕ ಕಾರ್ಯಗಳು ಸುಲಭವಾಗಿ ನಡೆಯುತ್ತಿವೆ. ಈ ಸಂಪರ್ಕ ಕಾರ್ಯ ಮೂರು ಹಂತದ ಜನಪ್ರತಿನಿಧಿಗಳಲ್ಲೂ ಇದ್ದರೆ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗಲಾರದು ಎನ್ನುವ ಸದಿಚ್ಛೆಯೊಂದಿಗೆ ಈ ಚಿಂತನ-ಮಂಥನ ನಡೆಸಲಾಗುತ್ತಿದೆ ಎಂದರು.

ತಾ.ಪಂ. ಸದಸ್ಯರಾದ ನೀಲಕಂಠಪ್ಪ ಕುಸಗೂರ  ಕರಿಯಪ್ಪ ಮಾತನಾಡಿದರು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರಿ ಹೊನ್ನಾಳಿ, ಜಿ.ಪಂ. ಸದಸ್ಯರಾದ ಶಿವಾನಂದ ಕನ್ನಪ್ಪಳವರ, ಮಾರುತಿ ರಾಠೋಡ, ಗಿರಿಜಮ್ಮ ಬ್ಯಾಲದಹಳ್ಳಿ ಇನ್ನಿತರರಿ ದ್ದರು. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಎ. ಎಸ್. ನಾರಜ್ಜಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮ್ಯಾನೇಜರ್ ಬಸವರಾಜ ಸಿಡೇನೂರ ವಂದಿಸಿದರು.

error: Content is protected !!