ಸುಸೂತ್ರವಾಗಿ ನಡೆದ 40 ಮದುವೆಗಳು

ಮಲೇಬೆನ್ನೂರು, ಏ.25- ಮಹಾಮಾರಿ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದ ವೀಕೆಂಡ್‌ ಕರ್ಫ್ಯೂ ನಡುವೆಯೂ ಮದುವೆಗಳು ಮಾತ್ರ ಸುಸೂತ್ರವಾಗಿ ನಡೆದವು.

ತಹಶೀಲ್ದಾರ್‌ ಕಚೇರಿಯ ಮಾಹಿತಿ ಪ್ರಕಾರ ಹರಿಹರ ತಾಲ್ಲೂಕಿನಲ್ಲಿ ಭಾನುವಾರ 40 ಮದುವೆಗಳು ಜರುಗಿದ್ದು, ಇವೆಲ್ಲಾ ಮುಂಚೆಯೇ ನಿಗದಿಯಾಗಿದ್ದವು.

ಆದರೆ ಕೊರೊನಾ 2ನೇ ಅಲೆ ಹೆಚ್ಚಾದ ಕಾರಣ ಕಲ್ಯಾಣ ಮಂಟಪಗಳಲ್ಲಿ ನಿಗದಿಯಾಗಿದ್ದ ಬಹುತೇಕ ಮದುವೆಗಳನ್ನು ಅವರವರ ಊರುಗಳಲ್ಲಿ ಮನೆಯ ಮುಂದೆಯೇ ಮಾಡಿಕೊಂಡರು.

ಶೇ. 25 ರಷ್ಟು ಜನರು ಮಾತ್ರ ಕಲ್ಯಾಣ ಮಂಟಪಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮದುವೆ ಮಾಡಿ ಮುಗಿಸಿದರು. ಹಳ್ಳಿಗಳಲ್ಲಿ ನಡೆದ ಮದುವೆಗಳಿಗೂ ಜನ ಹೆಚ್ಚು ಸೇರಿರಲಿಲ್ಲ. ಕರ್ಫ್ಯೂ ಹಾಗೂ ಕೊರೊನಾ ಕಾರಣದಿಂದಾಗಿ ಬಂಧು-ಮಿತ್ರರು ಮದುವೆಗಳಿಗೆ ಬರಲು ಅಷ್ಟಾಗಿ ಮನಸ್ಸು ಮಾಡದ ಕಾರಣ ಮದುವೆ ಸಮಾರಂಭಗಳು ಅತಿ ಹತ್ತಿರದವರ ಸಮ್ಮುಖದಲ್ಲಿ ನೆರವೇರಿದವು.

ಹರಿಹರ ನಗರದ ಕಲ್ಯಾಣ ಮಂಟಪಗಳಲ್ಲಿ ಜರುಗಿದ ಮದುವೆಗಳಿಗೆ ಜನರ ಸಂಖ್ಯೆ ಸರ್ಕಾರ ನಿಗದಿ ಮಾಡಿದ್ದಷ್ಟಿತ್ತು.

ಎಲ್ಲಾ ಮದುವೆ ಮನೆ ಹಾಗೂ ಕಲ್ಯಾಣ ಮಂಟಪಗಳಲ್ಲಿ ಸ್ಯಾನಿಟೈಜರ್‌ ಇಡಲಾಗಿತ್ತು. ಬಹುತೇಕ ಜನರು ಮಾಸ್ಕ್‌ ಧರಿಸಿದ್ದರು. ಕಲ್ಯಾಣ ಮಂಟಪಗಳಲ್ಲಿ ನಡೆದ ಮದುವೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿರುವುದೂ ಕಂಡುಬಂತು.

ಹಳ್ಳಿಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆಗಳು ಕೊರೊನಾ ಹಾಗೂ ಕರ್ಫ್ಯೂ ಕಾರಣಗಳಿಂದಾಗಿ 100 ರಿಂದ 200 ಜನರ ಒಳಗೆ ನಡೆದಿದ್ದು ವಿಶೇಷವಾಗಿತ್ತು. ಜೊತೆಗೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾ ಯಿತು. ಮದುವೆಗಳಲ್ಲಿ ಊಟವೂ ಸಹ ಬಹಳ ಸಿಂಪಲ್‌ ಆಗಿತ್ತು. ಹಳ್ಳಿಗಳಲ್ಲಿ ವಧು ಅಥವಾ ವರನ ಮನೆಯ ಮುಂದೆ ನಡೆದ ಮದುವೆಗಳು ಸಡಗರ-ಸಂಭ್ರಮದಿಂದ ನಡೆಯುವ ಮೂಲಕ ಈ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದವು. ಕಲ್ಯಾಣ ಮಂಟ ಪದಲ್ಲಿ ಜರುಗಿದ ಮದುವೆಗಳು ಸಪ್ಪೆಯಾಗಿದ್ದವು.

ಇಂದು ನಡೆದ ಬಹುತೇಕ ಮದುವೆಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ಅನುಮತಿ ಪತ್ರ ಪಡೆಯಲಾಗಿತ್ತು. ಯಾವ ಮದುವೆಗೂ ಪೊಲೀ ಸರಾಗಲೀ ಅಥವಾ ಇತರೆ ಇಲಾಖೆಯ ಅಧಿಕಾರಿ ಗಳಾಗಲೀ ವಿನಾಕಾರಣ ತೊಂದರೆ ನೀಡದಿರುವ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು.

error: Content is protected !!