ದಾವಣಗೆರೆ, ಫೆ. 25- ಕಲ್ಲು ಗಣಿ ಮತ್ತು ಕ್ರಷರ್ ಘಟಕಗಳು 15 ದಿನಗಳ ಒಳಗಾಗಿ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಹಾಗೂ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರು, ಕಂಟ್ರಾಕ್ಟರ್ಗಳು ಒಂದೂವರೆ ತಿಂಗಳು ಸ್ಟೋರೇಜ್ ಇರುವ ಸಿಸಿ ಕ್ಯಾಮೆರಾ ಅಳವಡಿಸಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡಬೇಕು. ಪೊಲೀಸರು ಟಾಸ್ಕ್ಪೋರ್ಸ್ ಸಮಿತಿಗೆ ಈ ಕುರಿತು ವರದಿ ಮಾಡಬೇಕೆಂದರು.
ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ಮಾತನಾಡಿ, ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರು, ಕಂಟ್ರಾಕ್ಟರ್ ಸಿಸಿ ಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ನೆಟ್ವರ್ಕ್ ವಿಡಿಯೋ ರೆಕಾರ್ಡಿಂಗ್(ಎನ್ವಿಆರ್)ವ್ಯವಸ್ಥೆ ಮೂಲಕ ಕೂತಿರುವಲ್ಲೇ ಸ್ಥಳದ ಘಟನಾವಳಿಯನ್ನು ವೀಕ್ಷಿಸಬಹುದಾಗಿದೆ ಎಂದರು.
ಹೊನ್ನಾಳಿ ತಾಲ್ಲೂಕಿನ ಬೀರಗೊಂಡನಹಳ್ಳಿ, ಚಿಕ್ಕಬಿದರಿ, ಅಚ್ಯುತಪುರ, ಹಿರೇಬಾಸೂರು, ರಾಂಪುರ, ಕುರುಡಿಹಳ್ಳಿ ಇತರೆಡೆ ಹಾಗೂ ಹರಿಹರ ತಾಲ್ಲೂಕಿನ ಸಾರತಿ, ರಾಜನಹಳ್ಳಿ, ಬಿಳಸನೂರು ಸೇರಿದಂತೆ ಅಧಿಕೃತ ಮರಳು ಬ್ಲಾಕ್ಗಳು ಇರುವೆಡೆ ಟಾಸ್ಕ್ಫೋರ್ಸ್ ಸಮಿತಿಯ ಅಧಿಕಾರಿಗಳು ರಾತ್ರಿ ವೇಳೆ ಓಡಾಡಿ, ಪರಿಶೀಲನೆ ನಡೆಸಬೇಕು. ಅನಧಿಕೃತ ಚಟುವಟಿಕೆ ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಪರ್ಮಿಟ್ ಇಲ್ಲದೇ ಮರಳು ಸಾಗಿಸುವುದು, ಸಂಗ್ರಹಿಸುವುದರ ವಿರುದ್ದ ದಂಡ ಹಾಕಬೇಕು. ಬಂಡಿಗಳಲ್ಲಿ ಮನೆ ಉದ್ದೇಶಕ್ಕೆ ಮರಳು ಉಪಯೋಗಿಸಬಹುದು. ಆದರೆ ವ್ಯವಹಾರಕ್ಕೆ ಬಳಸಿಕೊಳ್ಳಬಾರದು. ಚಕ್ಕಡಿ ಸೇರಿದಂತೆ ಇತರೆ ದೊಡ್ಡ ವಾಹನಗಳು ಒಂದು ಪರ್ಮಿಟ್ ಸಾಗಿಸಿ ಅನಧಿಕೃತವಾಗಿ ಬಹಳಷ್ಟು ಮರಳು ಹೊಡೆದು ಸರ್ಕಾರಕ್ಕೆ ರಾಜಧನ ನೀಡದೇ ಹಾನಿ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಅನಧಿಕೃತ ಚಟುವಟಿಕೆಯನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗೂ ನಿಯಮಾನುಸಾರ ದಂಡ ಸಂಗ್ರಹ ಮಾಡುವಂತೆ ಸೂಚನೆ ನೀಡಿದರು.
ಆರ್ಟಿಓ ಶ್ರೀಧರ್ ಮಲ್ಲಾಡ್ ಮಾತನಾಡಿ, ರಸ್ತೆಯಲ್ಲಿ ಸ್ಪೀಡ್ ಕಂಟ್ರೋಲರ್ ಮತ್ತು ಜಲ್ಲಿ ಮತ್ತು ಮರಳು ಗಾಡಿಗಳಿಂದ ಹಿಂದಿನ ಗಾಡಿಗಳಿಗೆ ಜಲ್ಲಿ ಮರಳು ಸಿಡಿದು ಹಾನಿಯಾಗುವುದನ್ನು ತಪ್ಪಿಸಲು ಟಾರ್ಪಲಿನ್ ಕವರ್ ಮಾಡಿಕೊಂಡು ಹೋಗುವ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಲೋಡ್ ಆದ ವಾಹನಗಳು ಸೇರಿದಂತೆ ಇತರೆ ವಾಹನಗಳಿಗೂ ಸ್ಪೀಡ್ ಕಂಟ್ರೋಲರ್ ಅಳವಡಿಸಲು ಆರ್ಟಿಓ ಕ್ರಮ ವಹಿಸುವಂತೆ ಹಾಗೂ ಟಾರ್ಪಲಿನ್ ಕವರ್ ಮಾಡದಿದ್ದರೆ ದಂಡ ಹಾಕುವಂತೆ ಜೊತೆಗೆ ಟಾರ್ಪಲಿನ್ ಕವರ್ ಮಾಡುವ ಮೂಲಕ ಇತರೆ ವಾಹನಗಳಿಗೆ ಹಾನಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಎಫ್ಐಆರ್ ದಾಖಲು: ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಮಾತನಾಡಿ, ಕಲ್ಲುಕ್ವಾರಿಯಲ್ಲಿ ಅನಧಿಕೃತ ಎಲೆಕ್ಟ್ರಿಕ್ ಡಿಟೋನೇಷನ್ ಇರುವ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿರುವ ಬಗ್ಗೆ ಮಾತನಾಡಿ, ಈ ಸಂಬಂಧ ಎಫ್ಐಆರ್ ದಾಖಲು ಮಾಡಲಾಗಿದೆ. ಎಕ್ಸ್ಪ್ಲೊಸಿವ್ ಸಬ್ಸ್ಟೆನ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನೆಗಳೂರಿನ ಲಿಂಗನಗೌಡ ಎಂಬುವವರು ಆಲೂರುಹಟ್ಟಿ ಗ್ರಾಮದ ಕುಮಾರನಾಯ್ಕ ಎಂಬುವವರ ಕಲ್ಲು ಕ್ವಾರಿಯ ಬಗ್ಗೆ ನೀಡಲಾದ ದೂರಿನನ್ವಯ ಪೋಲೀಸ್ ಉಪಾಧೀಕ್ಷಕರು, ಪಿಎಸ್ಐ, ಭೂವಿಜ್ಞಾನಿಗಳು, ಬ್ಲಾಸ್ಟಿಂಗ್ ತಜ್ಞರು ಸ್ಥಳ ಪರಿಶೀಲನೆ ನಡೆಸಿದಾಗ ಕಲ್ಲು ಕ್ವಾರಿಯನ್ನು ನಡೆಸುತ್ತಿರುವ ಆಲೂರು ಗ್ರಾಮದ ಸರ್ವೇ ನಂ.68/9 ರಲ್ಲಿ ಒಂದು ಜೀವಂತ ಎಲೆಕ್ಟ್ರಿಕ್ ಡಿಟೋನೇಟರ್ ಪತ್ತೆಯಾಗಿದ್ದು ಪಂಚನಾಮೆಯನ್ನು ಜರುಗಿಸಿ ಡಿಟೋನೇಟರ್ನ್ನು ಅಮಾನತ್ತುಪಡಿಸಿಕೊಂಡು ಅದನ್ನು ಸುರಕ್ಷತೆ ದೃಷ್ಟಿಯಿಂದ ಕಾಡಜ್ಜಿ ಗ್ರಾಮದಲ್ಲಿರುವ ಮ್ಯಾಗ್ಜಿನ್ನಲ್ಲಿ ಇಡಲು ಕ್ರಮ ವಹಿಸಲಾಗಿದೆ. ಹಾಗೂ ಈ ದೂರಿನನ್ವಯ ಸೂಕ್ತ ಕ್ರಮ ಕೈಗೊಳ್ಳಲು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಹಿರಿಯ ಭೂವಿಜ್ಞಾನಿ ಕೋದಂಡರಾಮ, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಡಿಹೆಚ್ಓ ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಡಿಡಿ ವಿಜಯಕುಮಾರ್, ಇತರೆ ಅಧಿಕಾರಿಗಳು ಇದ್ದರು.