ಹರಿಹರ, ಏ.25- ವೀಕೆಂಡ್ ಕರ್ಫ್ಯೂ ಇದ್ದರೂ ಅನಾವಶ್ಯಕವಾಗಿ ವಾಹನಗಳಲ್ಲಿ ಓಡಾಡುತ್ತಿರುವವರಿಗೆ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮಿ ಮತ್ತು ಆರೋಗ್ಯ ಇಲಾಖೆಯವರು ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಗಿ ಭದ್ರತೆ ಕ್ರಮಕ್ಕೆ ಮುಂದಾಗಿ ಯಾವುದೇ ಅಂಗಡಿ ಮುಂಗಟ್ಟು ತೆರೆಯದಂತೆ ತಡೆಯುವಲ್ಲಿ ಯಶಸ್ವಿಯಾದರು.
ಕೊರೊನಾ ದಿನ ದಿನಕ್ಕೆ ಸಾವು, ನೋವು ಗಳ ಸಂಖ್ಯೆ ಹೆಚ್ಚೆಚ್ಚು ಆಗುತ್ತಿದೆ. ಸರ್ಕಾರ ಕಟ್ಟು ನಿಟ್ಟಾಗಿ ಕಾನೂನು ಕ್ರಮ ಜರುಗಿಸುವಂತೆ ಆದೇಶ ಮಾಡಿದರೂ ನಿಮಗೆ ಯಾವುದೇ ಭಯ ಇಲ್ಲದೇ ಅನಾವಶ್ಯಕವಾಗಿ ತಿರುಗಾಡುತ್ತಿದ್ದೀರಿ. ಭಯವಿಲ್ಲದಂತೆ ತಿರುಗಾಡುತ್ತಿರುವ ಬೈಕ್ಗಳನ್ನು ಸೀಜ್ ಮಾಡಿ, ಸವಾರರ ಮೇಲೆ ಪ್ರಕರಣ ದಾಖಲು ಮಾಡುವಂತೆ ಪೊಲೀಸರಿಗೆ ವೃತ್ತ ನಿರೀಕ್ಷಕ ಸತೀಶ್ ಕುಮಾರ್. ಯು ಹೇಳಿದರು.
ವೀಕೆಂಡ್ ಕರ್ಫ್ಯೂ ಇದ್ದರೂ ಅನಾವಶ್ಯಕ ವಾಗಿ ಬೈಕ್, ಕಾರ್, ಇತರೆ ವಾಹನಗಳಲ್ಲಿ ತಿರುಗಾಡುವವರಿಗೆ ಮುಲಾಜಿಲ್ಲದೆ ಕ್ರಮ ಗಳನ್ನು ಕೈಗೊಳ್ಳಬೇಕಾಗುತ್ತದೆ. ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಮಹಾಮಾರಿ ವೈರಸ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಇಲಾಖೆಗಳೊಂದಿಗೆ ಸಹಕರಿಸಬೇಕೆಂದು ಹೇಳಿದರು.
ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮಿ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತ ವೈದ್ಯಾಧಿಕಾರಿ ಡಾ. ಡಿ. ಚಂದ್ರಮೋಹನ್, ರಾಜಸ್ವ ನಿರೀಕ್ಷಕರುಗಳಾದ ಆನಂದ್, ಸಮೀರ್ ಅಹ್ಮದ್, ಗ್ರಾಮ ಲೆಕ್ಕಾಧಿಕಾರಿ ಎಚ್.ಜಿ. ಹೇಮಂತ್ ಕುಮಾರ್, ಪೊಲೀಸ್ ಪೇದೆಗಳಾದ ಡಿ.ಟಿ. ಶ್ರೀನಿವಾಸ್, ಲಿಂಗರಾಜ್, ಸಂತೋಷ್, ಸತೀಶ್ ಮತ್ತಿತರರಿದ್ದರು.