ದಾವಣಗೆರೆ, ಜು.16- ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಹಕಾರ ಸಚಿವಾಲಯ ರಚಿಸಲುದ್ದೇಶಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್ ಸ್ವಾಗತಿಸಿವೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ತಜ್ಞರು ಹೇಳುವಂತೆ ಶೇ.40 ರಷ್ಟು ಪಾಲನ್ನು ಸಹಕಾರ ಕ್ಷೇತ್ರದ ಮೂಲಕವೇ ನಿರ್ವಹಿಸಲಾಗುತ್ತಿದೆ. ಸಹಕಾರ ಕ್ಷೇತ್ರಕ್ಕೆ ಪರ್ಯಾಯ ವ್ಯವಸ್ಥೆ ಆವಿಷ್ಕಾರವಾಗಿರುವುದು ಸಹಕಾರಿ ಕ್ಷೇತ್ರದ ಅಗತ್ಯತೆ ಮತ್ತು ಹಿರಿಮೆ ಎಂದು ಹೇಳಿದರು. 1904 ರಲ್ಲಿ ಸಹಕಾರಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು, 1905 ರಲ್ಲಿ ಸಹಕಾರ ಕಾಯ್ದೆ ಜಾರಿಯಾಗಿದೆ. ಸಹಕಾರ ಕ್ಷೇತ್ರವನ್ನು ಬಲಗೆೋಳಿಸಲು ಮತ್ತು ಅಭಿವೃದ್ಧಿಪಡಿಸಲು ಸಹಕಾರ ಸಚಿವಾಲಯ ಹೆೋಸ ಕಾನೂನು ಮತ್ತು ರೂಪುರೇಶೆಗಳನ್ನು ಸಿದ್ದಪಡಿಸುತ್ತಿದೆ ಎಂದರು.
ರಾಜ್ಯದಲ್ಲಿ 264 ಅರ್ಬನ್ ಬ್ಯಾಂಕ್ ಗಳಿದ್ದು, 1145 ಶಾಖೆಗಳನ್ನು ಹೆೋಂದಿವೆ. 10 ಸಾವಿರಕ್ಕೂ ಹೆಚ್ಚು ನೌಕರರಿದ್ದಾರೆ. ಒಟ್ಟಾರೆ ಎಲ್ಲಾ ಸಹಕಾರಿ ಬ್ಯಾಂಕುಗಳಿಂದ ಸರಾಸರಿ 50 ಸಾವಿರ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 43 ಸಾವಿರ ಕೋಟಿ ಠೇವಣಿ ಸಂಗ್ರಹಿಸಿ, 28 ಸಾವಿರ ಕೋಟಿ ರೂ. ಸಾಲ ಸೌಲಭ್ಯ ಒದಗಿಸಿವೆ ಎಂದು ಅಂಕಿ -ಅಂಶಗಳನ್ನು ನೀಡಿದರು. ಹಿಂದಿನಂತೆ ಸಹಕಾರ ಸಂಘಗಳ ಮೂಲಕ ನೀಡಲಾಗುತ್ತಿದ್ದ ಯಶಸ್ವಿನಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದ ಅವರು, ಠೇವಣಿದಾರರ ಭದ್ರತಾ ವಿಮೆಯನ್ನು 1 ಲಕ್ಷದಿಂದ 5 ಲಕ್ಷ ರೂ.ಗಳ ವರೆಗೆ ಏರಿಕೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಜೆ.ಎಸ್. ವೇಣುಗೋಪಾಲ ರೆಡ್ಡಿ, ಉಪಾಧ್ಯಕ್ಷ ಬಿ. ಶೇಖರಪ್ಪ, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಜಿ.ಎನ್. ಸ್ವಾಮಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.