ದಾವಣಗೆರೆ, ಫೆ.24- ಮಹಾನಗರ ಪಾಲಿಕೆ ಎರಡನೇ ಅವಧಿಯ ಮೇಯರ್ ಆಗಿ 25ನೇ ವಾರ್ಡ್ನ ಎಸ್.ಟಿ. ವೀರೇಶ್ ಹಾಗೂ ಉಪ ಮೇಯರ್ ಆಗಿ 44ನೇ ವಾರ್ಡ್ನ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಎಸ್.ಟಿ. ವೀರೇಶ್, ಉಪ ಮೇಯರ್ ಸ್ಥಾನಕ್ಕೆ ಶಿಲ್ಪಾ ಜಯಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ 38ನೇ ವಾರ್ಡ್ನ ಗಡಿಗುಡಾಳ್ ಮಂಜುನಾಥ್ ಹಾಗೂ 36ನೇ ವಾರ್ಡ್ನ ನಾಗರತ್ನಮ್ಮ ನಾಮಪತ್ರ ಸಲ್ಲಿಸಿದ್ದರು. 29 ಮತ ಪಡೆದು ಬಿಜೆಪಿ ಜಯಗಳಿಸಿದರೆ ಕಾಂಗ್ರೆಸ್ 22 ಮತ ಪಡೆಯಲು ಸಾಧ್ಯವಾಯಿತು.
ಕಳೆದ ಬಾರಿ ತಮ್ಮದೇ ಪಕ್ಷದ ಸದಸ್ಯರಿಬ್ಬರು ಗೈರು ಹಾಜರಾಗಿದ್ದರಿಂದ ಕಾಂಗ್ರೆಸ್ ಅನಿವಾರ್ಯವಾಗಿ ಮೇಯರ್ ಅಧ್ಯಕ್ಷ ಗಾದಿಯನ್ನು ಬಿಜೆಪಿಗೆ ಬಿಟ್ಟುಕೊಟ್ಟಿತ್ತು. ಆದರೆ ಈ ಬಾರಿ ಆಡಳಿತ ಹಿಡಿಯಲು ಶತಾಯಗತಾಯ ಪ್ರಯತ್ನ ಪಟ್ಟಿದ್ದ ಕಾಂಗ್ರೆಸ್ಗೆ ಪಕ್ಷದ ಸದಸ್ಯ ದೇವರಮನೆ ಶಿವಕುಮಾರ್ ನಿನ್ನೆ ರಾತ್ರಿ ದಿಢೀರ್ ರಾಜೀನಾಮೆ ನೀಡಿದ್ದು ಆಘಾತ ತಂದಿತ್ತು.
ಈ ಮೂಲಕ ಕಳೆದ ಮೂರ್ನಾಲ್ಕು ತಿಂಗಳು ಮುನ್ನವೇ ಕಾಂಗ್ರೆಸ್ ನಡೆಸಿದ ಎಲ್ಲಾ ಕಸರತ್ತುಗಳು ವಿಫಲವಾಗಿ, ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯಿತು. ಕಾಂಗ್ರೆಸ್ ಸದಸ್ಯರೇ ಬಿಜೆಪಿಯ ಹಾದಿಯನ್ನು ಸುಗಮಗೊಳಿಸಿದಂತಾಯಿತು.
ರಾತ್ರಿ ನಡೆದ ಬೆಳವಣಿಗೆಯಿಂದ ಕಾಂಗ್ರೆಸ್ ಸೋಲು ಖಚಿತವಾಗುತ್ತಿದ್ದಂತೆ ಮತದಾನಕ್ಕೆ ಆಗಮಿಸಬೇಕಾಗಿದ್ದ ವಿಧಾನ ಪರಿಷತ್ ಸದಸ್ಯರು ನಿರ್ಧಾರ ಬದಲಿಸಿದ್ದರು. ಅಲ್ಲದೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸಹ ಗೈರು ಹಾಜರಾದರು. ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರಾದರೂ, ಯಾರಲ್ಲೂ ಉತ್ಸಾಹ ಕಂಡು ಬರಲಿಲ್ಲ.
ಬಿಜೆಪಿಯ ನಾಲ್ವರು ಪಕ್ಷೇತರರೂ ಸೇರಿ 21 ಸದಸ್ಯರ ಬಲ ಹೊಂದಿತ್ತು. ಜೊತೆಗೆ ಓರ್ವ ಶಾಸಕ, ಸಂಸದ ಹಾಗೂ ವಿಧಾನ ಪರಿಷತ್ನ ಏಳು ಸದಸ್ಯರು ಸೇರಿ ಒಟ್ಟು 30 ಮತಬಲ ಹೊಂದಿತ್ತು. ಆದರೆ ಸದಸ್ಯೆ ಜಯಮ್ಮ ಗೋಪಿನಾಯ್ಕ ಅವರು ಅನಾರೋಗ್ಯದ ನಿಮಿತ್ತ್ಯ ಗೈರಾಗಿದ್ದರಿಂದ 29 ಮತಗಳನ್ನು ಪಡೆಯಿತು.
ಹೋರಾಟಗಾರನಿಗೆ ಒಲಿದು ಬಂದ ಮಹಾನಗರ ಪಾಲಿಕೆ ಮೇಯರ್ ಪಟ್ಟ
ದಾವಣಗೆರೆಯ ಮಹಾನಗರ ಪಾಲಿಕೆಯ 25ನೇ ವಾರ್ಡ್ ನಿಂದ ಪ್ರಥಮ ಬಾರಿಗೆ ಸ್ಪರ್ಧಿಸಿ, ಜಯಗಳಿಸಿದ್ದ ಎಸ್.ಟಿ. ವೀರೇಶ್ ಅವರಿಗೆ ಪಾಲಿಕೆಯ ಮೇಯರ್ ಗಾದಿ ದಕ್ಕಿದ್ದು ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ಸಂತಸ ತಂದಿದೆ.
ಎಸ್. ತಿಮ್ಮಪ್ಪ ಮತ್ತು ಮಲ್ಲಮ್ಮ ಅವರ ಪುತ್ರರಾದ ಎಸ್.ಟಿ. ವೀರೇಶ್ ಮೆಕಾನಿಕಲ್ ಡಿಪ್ಲೋಮಾದಲ್ಲಿ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿ ಮುಖಂಡರಾಗಿ ಎಬಿವಿಪಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಅನೇಕ ಹೋರಾಟದಲ್ಲಿ ಭಾಗವಹಿಸಿದ್ದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಹಿಂದೂ ಜಾಗರಣ ವೇದಿಕೆಗಳಲ್ಲಿ ವೀರೇಶ್ ಗುರುತಿಸಿಕೊಂಡಿದ್ದರು. ಪಾಲಿಕೆ ಸದಸ್ಯರಾದ ನಂತರ ವಾರ್ಡ್ನಲ್ಲಿ ಅತಿ ಚುರುಕಿನಿಂದ ಕೆಲಸ ಮಾಡುವ ಮೂಲಕ ಸ್ಥಳೀಯರ ಮೆಚ್ಚುಗೆ ಪಡೆದಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ ಕೆಲಸ ಮಾಡಿದ್ದ ವೀರೇಶ್, ಹಿಂದೂ ಜಾಗರಣಾ ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ, ಶಿವಮೊಗ್ಗ ವಿಭಾಗ ಸಂಚಾಲಕ, ದಕ್ಷಿಣ ಪ್ರಾಂತ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಮೂಲಕ ವಿವಿಧ ಸಂಘಟನೆಗಳ ನೆಚ್ಚಿನ ನಾಯಕರಾಗಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ನೂತನ ಮೇಯರ್ ಘೋಷಣೆ ನಂತರ ಎಸ್.ಟಿ. ವೀರೇಶ್ ಅವರನ್ನು ಅಭಿಮಾನಿಗಳು ಹೊತ್ತುಕೊಂಡು ಸಂಭ್ರಮಾಚರಿಸಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ವೇಳೆ ಭಾಗವಹಿಸಿದ್ದ ಸಂಸದರು, ಶಾಸಕರು, ಸದಸ್ಯರು (ಬಲಚಿತ್ರ)
ಸಮಸ್ಯೆಗಳ ಪರಿಹಾರಕ್ಕೆ ಪಾಟ್ಸಾಪ್ ಸಂಖ್ಯೆ
ದಾವಣಗೆರೆ, ಫೆ.24- ನಾಳೆಯೇ ಪ್ರತ್ಯೇಕ ವಾಟ್ಸಾಪ್ ಸಂಖ್ಯೆ ನೀಡುವ ಮೂಲಕ ನಗರದ ಜನತೆಯ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸು ತ್ತೇನೆ ಎಂದು ಪಾಲಿಕೆ ನೂತನ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಗರದ ಸ್ವಚ್ಛತೆ, ನೀರು, ಬೀದಿದೀಪ ಮೊದಲಾದ ಮೂಲ ಸೌಕರ್ಯಗಳಿಗೆ ಅದ್ಯತೆ ನೀಡುತ್ತೇನೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ 192 ಉದ್ಯನವನಗಳಿದ್ದು, ಅದರಲ್ಲಿ ಕೇವಲ 100 ಉದ್ಯನವಗಳು ನಿರ್ವಹಣೆ ಆಗುತ್ತಿವೆ. ಇದರೊಟ್ಟಿಗೆ ಅರ್ಬನ್ ಫಾರೇಸ್ಟ್ ಮಾಡಲು ಶ್ರಮಿಸಲಾಗುವುದು ಎಂದರು. ಪಾಲಿಕೆಯಲ್ಲಿ ಕಂದಾಯ ಬಾಕಿ ಹೆಚ್ಚು ಉಳಿದಿದೆ. ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರ ವಸತಿ ನಿಲಯ ಕೆಲಸ ಶೀಘ್ರವಾಗಿ ಮುಗಿಸುವುದಾಗಿ ಹೇಳಿದರು.
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಮೇಯರ್ ಜವಾಬ್ದಾರಿ ನೀಡಲಾ ಗಿದೆ. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವುದಾಗಿ ಹೇಳಿದರು.
ಬಿಜೆಪಿಗೆ `ಶಿವ’ ಕೃಪೆ
ಮಹಾನಗರ ಪಾಲಿಕೆ ಚುನಾವಣೆ ಈ ಬಾರಿ ಜಿದ್ದಾ ಜಿದ್ದಿಯಿಂದ ಕೂಡಿರಲಿದೆ ಎಂದು ಮಂಗಳವಾರ ರಾತ್ರಿ ವರೆಗೂ ಚರ್ಚೆಗಳು ನಡೆದಿದ್ದವು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ನ ಹಿರಿಯ ಸದಸ್ಯ ದೇವರಮನೆ ಶಿವಕುಮಾರ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುತ್ತಿದ್ದಂತೆ ನೀಡುತ್ತಿದ್ದಂತೆ ಕಾಂಗ್ರೆಸ್ ಸೋಲೊಪ್ಪಿಕೊಂಡಿತು.
ಶಿವಕುಮಾರ್ ಬಿಜೆಪಿಗೆ ಬಂದದ್ದು ಕಮಲ ಪಾಳೆಯಲ್ಲಿ ಉತ್ಸಾಹ ಗರಿಗೆದರಿತು. ಚುನಾವಣೆಗೂ ಮೊದಲೇ ಪಾಲಿಕೆ ಬಿಜೆಪಿ ವಶ ಎಂಬ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದವು. ಕಳೆದ ಬಾರಿ ಚುನಾವಣೆಯಲ್ಲೂ ಕಾಂಗ್ರೆಸ್ನ ಇಬ್ಬರು ಸದಸ್ಯರು ಗೈರು ಹಾಜರಾಗುವ ಮೂಲಕ ಬಿಜೆಪಿ ಅಧಿಕಾರಕ್ಕೆ ಸಹಕಾರ ನೀಡಿದ ನೆನಪು ಮಾಸುವ ಮುನ್ನವೇ ಮತ್ತೊಂದು ರಾಜೀನಾಮೆ ಆಘಾತ ಕೈ ಪಕ್ಷದ ಸದಸ್ಯರನ್ನು ಕಂಗೆಡಿಸಿತ್ತು.
ಎಸ್ಸೆಸ್ ಸೇರಿ ನಾಲ್ವರು ಗೈರು
ಮೇಯರ್-ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಗೈರು ಹಾಜರಾಗಿದ್ದರು. ಅದರೊಟ್ಟಿಗೆ ವಿಧಾನ ಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ, ರಘು ಆಚಾರ್, ಯು.ಬಿ. ವೆಂಕಟೇಶ್ ಸಹ ಗೈರಾಗಿದ್ದರು.
ಸುಧೀರ್ಘ ಚುನಾವಣಾ ಪ್ರಕ್ರಿಯೆ
ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆ ಸಂಜೆ 5.15ರವರೆಗೂ ನಡೆಯಿತು. 11 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ, ಹಿಂಪಡೆಯುವ ಪ್ರಕ್ರಿಯೆ ಮುಗಿದಿತ್ತು. ಚುನಾವಣಾಧಿಕಾರಿ ನವೀನ್ ರಾಜ್ ಸಿಂಗ್ 11 ಗಂಟೆಗೆ ಪಾಲಿಕೆಗೆ ಆಗಮಿಸಿದಾಗ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೂ ಗುಚ್ಛ ನೀಡಿ ಸ್ವಾಗತಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರ ನೇತೃತ್ವದಲ್ಲಿ ದಾವಣಗೆರೆಯ ಜಿಎಂಐಟಿ ಗೆಸ್ಟ್ ಹೌಸ್ನಿಂದ 29 ಮತದಾರರು ಬಸ್ಸಿನಲ್ಲಿ ಪಾಲಿಕೆ ಆವರಣಕ್ಕೆ ಬಂದರು.
ಪಾಲಿಕೆಗೆ ಸಾರ್ವಜನಿಕರ ಪ್ರವೇಶ ನಿರ್ಭಂಧಿಸಿ, ಸೂಕ್ತ ಬಂದೋ ಬಸ್ತ್ ಮಾಡಲಾಗಿತ್ತು. ಎಸ್ಪಿ ಹನುಮಂತರಾಯ್, ಡಿವೈಎಸ್ಪಿ ನಾಗೇಶ್ ಐತಾಳ್ ಇತರರು ಸ್ಥಳದಲ್ಲಿದ್ದರು.
ಪಾಲಿಕೆ ಮುಂಭಾಗದ ಏಕಮುಖ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದ್ದರಿಂದ ಮತ್ತೊಂದು ಬದಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಆಗಾಗ ಟ್ರಾಫಿಕ್ ಜಾಮ್ ಆಗುತ್ತಿತ್ತು. ಬಿಜೆಪಿ ಅಧಿಕಾರ ಪಡೆಯುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕುಟುಂಬ ರಾಜಕಾರಣ ಬೇಡವೆಂದು ಬೇರೆಯವರಿಗೆ ಅವಕಾಶ: ರವೀಂದ್ರನಾಥ್
ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಪುತ್ರಿ ವೀಣಾ ನಂಜಪ್ಪ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎ. ರವೀಂದ್ರನಾಥ್, ಕುಟುಂಬದಲ್ಲಿ ನಾನು ಶಾಸಕನಾಗಿದ್ದೇನೆ. ಕುಟುಂಬ ರಾಜಕಾರಣ ಮಾಡುವುದು ಬೇಡ ಎನ್ನುವ ಉದ್ದೇಶದಿಂದ ಬೇರೆಯವರಿಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಆದರೆ, ಮುಂದಿನ ಮೀಸಲಾತಿ ಸಾಮಾನ್ಯ ಮಹಿಳೆಗೆ ಬರುವ ಸಾಧ್ಯತೆ ಇದ್ದು. ಆಗ ವಿಣಾ ನಂಜಪ್ಪ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಬಿಜೆಪಿ ಕಾರ್ಯಕರ್ತರಿಂದ ಕೇಳಿ ಬಂದವು.
ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರ ಪುತ್ರ ರಾಕೇಶ್ ಜಾಧವ್, ಎಸ್.ಟಿ. ವೀರೇಶ್ ಹಾಗೂ ಕೆ.ಟಿ.ವೀರೇಶ್ (ಪೈಲ್ವಾನ್ ವೀರೇಶ್) ಅವರ ಹೆಸರುಗಳೂ ಸಹ ಮುಂಚೂಣಿಯಲ್ಲಿದ್ದವು. ಆದರೆ ಮುಖಂಡರು ಎಸ್.ಟಿ. ವೀರೇಶ್ ಅವರ ಹೆಸರನ್ನು ಅಂತಿಗೊಳಿಸಿದ್ದರು.
ಆಪರೇಷನ್ ನಡೆಸಿಲ್ಲ : ಸಿದ್ದೇಶ್ವರ್ ಸ್ಪಷ್ಟನೆ
ಮೇಯರ್ ಚುನಾವಣೆಗಾಗಿ ಬಿಜೆಪಿಯಿಂದ ಯಾವುದೇ ರೀತಿಯ ಆಪರೇಷನ್ ಕಮಲ ನಡೆಸಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಕಾಂಗ್ರೆಸ್ನಲ್ಲಿ ಬೇಸರಗೊಂಡ ದೇವರಮನೆ ಶಿವಕುಮಾರ್ ಬಿಜೆಪಿಗೆ ಬಂದಿದ್ದಾರೆ. ಯಾವುದೇ ಹಣ, ಆಮಿಷವೊಡ್ಡಿ ಕರೆ ತಂದಿಲ್ಲ ಎಂದು ಸ್ಪಷ್ಟಪಡಿಸಿದರು. ಮತ್ತಷ್ಟು ಸದಸ್ಯರು ಬಿಜೆಪಿ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಕಾದು ನೋಡಿ ಎಂದಷ್ಟು ಸಂಸದರು ಉತ್ತರಿಸಿದರು.
ಸದಸ್ಯರೊಂದಿಗೆ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಪಿ. ನಂಜುಂಡಿ, ಆರ್.ಶಂಕರ್, ಲೇಹನ್ ಸಿಂಗ್ ಸಿರಾಯಿ, ಎಸ್.ರವಿಕುಮಾರ್, ತೇಜಸ್ವಿನಿ ಗೌಡ, ಹನುಮಂತ ನಿರಾಣಿ, ಎಂ.ಚಿದಾನಂದ ಇಂದಿನ ಚುನಾವಣೆಯಲ್ಲಿ ಮತ ಚಲಾಯಿಸಿದರು.
ಕಾಂಗ್ರೆಸ್ನ ಪಕ್ಷದಲ್ಲಿ ಓರ್ವ ಪಕ್ಷೇತರ ಸೇರಿ 22 ಸದಸ್ಯರು, ಒಬ್ಬ ಶಾಸಕ, ವಿಧಾನ ಪರಿಷತ್ತಿನ ನಾಲ್ವರು ಹಾಗೂ ಜೆಡಿಎಸ್ನ ಒಬ್ಬ ಸದಸ್ಯೆ ಸೇರಿ ಒಟ್ಟು 28 ಮತಬಲ ಇತ್ತು. ಆದರೆ ಜೆಡಿಎಸ್ ಸದಸ್ಯ ಗೈರು ಹಾಜರಾಗಿದ್ದರು. ಮೂವರು ಎಂ.ಎಲ್.ಸಿ., ಶಾಸಕ ಸೇರಿ ಐವರ ಗೈರು ಹಾಗೂ ಓರ್ವ ಸದಸ್ಯನ ರಾಜೀನಾಮೆಯಿಂದಾಗಿ ಸಂಖ್ಯಾ ಬಲ 22ಕ್ಕೆ ಕುಸಿದಿತ್ತು.
ಮಹಾನಗರ ಪಾಲಿಕೆಯಲ್ಲಿ ಮತ ಚಲಾಯಿಸಲು ಅರ್ಹರಾದವರ ಸಂಖ್ಯೆ 58. ಗೆಲುವಿಗೆ ಬೇಕಾಗಿದ್ದು 29 ಮತಗಳು. ಪಾಲಿಕೆಯ ಒಟ್ಟು ಸದಸ್ಯರು 45, ಕಳೆದ ವರ್ಷ ಓರ್ವ ಕಾಂಗ್ರೆಸ್ ಸದಸ್ಯರು ಹಾಗೂ ನಿನ್ನೆ ರಾತ್ರಿ ಕಾಂಗ್ರೆಸ್ ಸದಸ್ಯರೊಬ್ಬರು ರಾಜೀನಾಮೆ ನೀಡಿದ್ದರಿಂದ ಸದಸ್ಯರ ಸಂಖ್ಯೆ 43ಕ್ಕೆ ಇಳಿದಿತ್ತು. ಪ್ರಸ್ತುತ 20 ಕಾಂಗ್ರೆಸ್, 17 ಬಿಜೆಪಿ ಹಾಗೂ 1 ಜೆಡಿಎಸ್, 5 ಪಕ್ಷೇತರರ ಸದಸ್ಯರು ಇದ್ದರು.
20 ಕಾಂಗ್ರೆಸ್ ಸದಸ್ಯರ ಜೊತೆ ಪಕ್ಷೇತರ ಅಭ್ಯರ್ಥಿ ಉದಯ್ ಕುಮಾರ್ ಹಾಗೂ ಎಂ.ಎಲ್.ಸಿ. ಮೋಹನ್ ಕೊಂಡಜ್ಜಿ ಸೇರಿ ಕಾಂಗ್ರೆಸ್ 22 ಮತಗಳನ್ನು ಪಡೆದಿತ್ತು.
ಬಿಜೆಪಿ ತನ್ನ 17 ಸದಸ್ಯರೊಂದಿಗೆ 3 ಪಕ್ಷೇತರ ಸದಸ್ಯರ ಬೆಂಬಲ ಪಡೆದಿತ್ತು. ಇದರೊಟ್ಟಿಗೆ 7 ಜನ ಎಂ.ಎಲ್.ಸಿ.ಗಳು, ಓರ್ವ ಸಂಸದ, ಓರ್ವ ಶಾಸಕ ಸೇರಿ 29 ಜನರ ಬೆಂಬಲ ಪಡೆದಿತ್ತು.
ಬಿಜೆಪಿಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶಶಿಧರ್ ಹೆಮ್ಮನ ಬೇತೂರು, ಕಲ್ಲೇಶ್ ಇತರರು ಪಾಲಿಕೆ ಆವರಣದಲ್ಲಿದ್ದು, ನೂತನ ಮಹಾಪೌರರಿಗೆ ಶುಭಶಯ ಕೋರಿದರು.