ದಾವಣಗೆರೆ, ಫೆ.23- ಆಟಿಕೆ ವಲಯದಲ್ಲಿ ಆತ್ಮ ನಿರ್ಭರ ಭಾರತ ಹಾಗೂ ವೋಕಲ್ ಫಾರ್ ಲೋಕಲ್ ಅಭಿಯಾನವನ್ನು ಸಾಕಾರಗೊಳಿಸಲು ಇದೇ ದಿನಾಂಕ 27 ರಿಂದ ಮಾರ್ಚ್ 2 ರವರೆಗೆ ಭಾರತೀಯ ಆಟಿಕೆ ಮೇಳ 2021 ಅನ್ನು ಆಯೋಜಿಸಲಾಗಿದೆ.
ನಾಲ್ಕು ದಿನಗಳ ಕಾಲ ವರ್ಚ್ಯುವಲ್ ವೇದಿಕೆಯಲ್ಲಿ ನಡೆಯಲಿರುವ ಈ ಮೇಳ ಶಿಕ್ಷಣದಲ್ಲಿ ಆಟಿಕೆಗಳ ಪರಿಣಾಮಕಾರಿ ಬಳಕೆ, ಭಾರತೀಯ ಆಟಿಕೆಗಳ ಇತಿಹಾಸ, ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಆಟಿಕೆಗಳ ಪಾತ್ರ, ಆಟಿಕೆ ಉದ್ಯಮದ ವಿವಿಧ ಆಯಾಮಗಳು ಸೇರಿದಂತೆ ಹತ್ತು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ.
ಆಟಿಕೆ ವಲಯದಲ್ಲಿ ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಯುವ ಉದ್ದಿಮೆದಾರರಿಗೆ ಮೇಳದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಮಧ್ಯ ಕರ್ನಾಟಕದ ದಾವಣಗೆರೆಯ ಐಡಾ ಲೌವ್ ಲೇಸ್ ಕಂಪನಿ ಆಯ್ಕೆ ಆಗಿದೆ.
ಇಲ್ಲಿ ತಯಾರಾಗುವ ವಸ್ತುಗಳಿಗೆ ಬ್ರೆಜಿಲ್, ಯುರೋಪ್, ದುಬೈ ಸೇರಿದಂತೆ ವಿವಿಧ ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಕಂಪನಿಯ ಸಂಸ್ಥಾಪಕ ಡಾ.ಎಲ್.ರಾಕೇಶ್.
ಈ ಕುರಿತು ಡಾ.ಎಲ್.ರಾಕೇಶ್ ಆಕಾಶವಾಣಿಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.