ಬೆಂಗಳೂರು, ಏ.23- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರವು ಪ್ರತಿವರ್ಷ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ದಾವಣಗೆರೆ ತಹಶೀಲ್ದಾರ್ ಬಿ.ಎನ್. ಗಿರೀಶ್ ಭಾಜನರಾಗಿದ್ದಾರೆ.
ವಿವಿಧ ಇಲಾಖೆಗಳ 10 ಜನ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಘೋಷಿಸಿ ಸರ್ಕಾರ ಇಂದು ಆದೇಶ ಹೊರಡಿಸಿದೆ. ಪ್ರಶಸ್ತಿಗೆ ಆಯ್ಕೆಯಾದ 10 ಜನರಲ್ಲಿ ತಹಶೀಲ್ದಾರ್ ಗಿರೀಶ್ ಕೂಡಾ ಒಬ್ಬರಾಗಿದ್ದು, ಈ ಪ್ರಶಸ್ತಿಯು 25 ಸಾವಿರ ರೂ. ಪ್ರೋತ್ಸಾಹ ಧನ ಮತ್ತು ಪ್ರಮಾಣ ಪತ್ರವನ್ನೊಳಗೊಂಡಿದೆ.
ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಸರ್ಕಾರವು ಪ್ರತಿ ವರ್ಷ ಜನವರಿ 26ರ ಗಣರಾಜ್ಯೋತ್ಸವದಂದು ನೀಡುತ್ತಿತ್ತು. ಏಪ್ರಿಲ್ 21 ನ್ನು ಕರ್ನಾಟಕ ರಾಜ್ಯಸರ್ಕಾರಿ ನೌಕರರ ದಿನಾಚರಣೆಯನ್ನಾಗಿ ಆಚರಿಸಲು ಕರ್ನಾಟಕ ಸರ್ಕಾರ ಈ ವರ್ಷ ನಿರ್ಧರಿಸಿದ್ದು, ಈ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲು ಉದ್ದೇಶಿಸಿತ್ತು. ಆದರೆ, ಕೊರೊನಾ ವೈರಸ್ ಅಲೆಯ ಹಿನ್ನೆಲೆಯಲ್ಲಿ ನಿನ್ನೆ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಅಂದು ನಡೆಯುವ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.