ಗೃಹಬಂಧನಕ್ಕೆ ಸಿದ್ಧ

ವಾರಾಂತ್ಯದ ಕರ್ಫ್ಯೂಗೆ ಶುಕ್ರವಾರವೇ ಸಜ್ಜಾದ ಜನ

ನಗರದಲ್ಲಿ ಲಗುಬಗೆಯಿಂದ ಅಗತ್ಯ ವಸ್ತುಗಳ ಖರೀದಿ

ದಾವಣಗೆರೆ, ಏ.23- ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನ ವರೆಗಿನ ಗೃಹಬಂಧನಕ್ಕೆ ನಗರದ ಜನತೆ ಶುಕ್ರವಾರವೇ ಸಜ್ಜಾಗುತ್ತಿದ್ದುದು ಕಂಡು ಬಂತು.

ನಗರದ ಪ್ರಮುಖ ರಸ್ತೆ ಹಾಗೂ ಮಾರುಕಟ್ಟೆಗಳ ಅಂಗಡಿಗಳಲ್ಲಿ ದಿನಸಿ, ಹಣ್ಣು-ತರಕಾರಿ, ಔಷಧ ಮತ್ತಿತರೆ ಅಗತ್ಯ ವಸ್ತುಗಳನ್ನು ಜನತೆ ತರಾತುರಿಯಲ್ಲಿ ಖರೀದಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೊರೊನಾ ಮಾರ್ಗಸೂಚಿಯಂತೆ ಅನೇಕ ಅಂಗಡಿಗಳು ಮುಚ್ಚಲ್ಪಟ್ಟಿದ್ದರೂ ರಸ್ತೆಗಳಲ್ಲಿ ಜನರ ಓಡಾಟ ಪ್ರತಿದಿನ ಇರುವಂತೆಯೇ ಇತ್ತು.

ರೈತಾಪಿ ವರ್ಗ ಕೃಷಿ ಚಟುವಟಿಕೆಗೆ ಬೇಕಾದ ಪೈಪ್‌ಗಳು, ತಾಡಪಾಲುಗಳು, ಮೋಟಾರ್‌ಗಳನ್ನು ಖರೀದಿಸಿ, ಟ್ರ್ಯಾಕ್ಟರ್‌ಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದುದು ಕಂಡು ಬಂತು.

ಅಂಗಡಿಗಳು ಬಂದ್: ನಗರದ ಹಳೆ ಭಾಗದ ಗಡಿಯಾರ ಕಂಬ, ಮಂಡಿಪೇಟೆ, ಚೌಕಿಪೇಟೆ, ಕಾಯಿಪೇಟೆ, ಕಾಳಿಕಾದೇವಿ ರಸ್ತೆ, ವಿಜಯಲಕ್ಷ್ಮಿ ರಸ್ತೆ, ಹೊಸ ಭಾಗದಲ್ಲಿರುವ ಜಯದೇವ ವೃತ್ತ, ಅಶೋಕ ರಸ್ತೆ, ಎವಿಕೆ ರಸ್ತೆಗಳಲ್ಲಿನ ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿದ್ದವು.  ಸರ್ಕಾರದ ಕೊರೊನಾ ಮಾರ್ಗಸೂಚಿಯಲ್ಲಿ ಅವಕಾಶ ನೀಡಲ್ಪಟ್ಟಿದ್ದ ಅಂಗಡಿಗಳು ಮಾತ್ರ ತೆರೆದಿದ್ದವು.

ಸಂಜೆಯಾಗುತ್ತಲೇ ಮುಖ್ಯ ರಸ್ತೆಗಳು ಖಾಲಿಯಾಗತೊಡಗಿದವು. ಇತ್ತ ಬಡಾವಣೆಗಳಲ್ಲಿನ ತರಕಾರಿ, ಹಣ್ಣು, ದಿನಸಿ ಅಂಗಡಿಗಳು ಗ್ರಾಹಕರಿಂದ ತುಂಬಿದ್ದವು. ಹಿಟ್ಟಿನ ಗಿರಣಿ ಅಂಗಡಿಗಳಲ್ಲೂ ಜನರ ಸಂಖ್ಯೆ ಹೆಚ್ಚಾಗಿತ್ತು. ಪೆಟ್ರೋಲ್ ಬಂಕ್‌ಗಳಲ್ಲೂ ಜನರು ನಾ ಮುಂದು ತಾ ಮುಂದು ಎಂದು ಪೆಟ್ರೋಲ್‌ಗಾಗಿ ಮುಗಿ ಬಿದ್ದಿದ್ದರು.

9 ಗಂಟೆಯಿಂದ ನೈಟ್ ಕರ್ಫ್ಯೂ ಇದ್ದ ಹಿನ್ನೆಲೆಯಲ್ಲಿ ಕಾರ-ಮಂಡಕ್ಕಿ ಅಂಗಡಿಗಳಲ್ಲಿ ಮಿರ್ಚಿ ಬಾಣಲೆಯಿಂದ ಹೊರ ಬರುತ್ತಿದ್ದಂತೆ ಖಾಲಿಯಾಗುತ್ತಿದ್ದವು. ಪ್ರಮುಖ ವೃತ್ತಗಳಲ್ಲಿನ ತಿಂಡಿ ಗಾಡಿಗಳಲ್ಲಿ ಜನತೆ ಗಡಿ ಬಿಡಿಯಿಂದ ಪಾರ್ಸಲ್ ಕಟ್ಟಿಸಿಕೊಂಡು ಹೋಗುತ್ತಿದ್ದರು. ಪೊಲೀಸರ ವಾರ್ನಿಂಗ್ : ನಗರದಲ್ಲಿ ಹೆಚ್ಚಿನ ಜನ ಸೇರಿದಂತೆ ಪೊಲೀಸರು ಗಸ್ತು ತಿರುಗುತ್ತಿದ್ದರು. ಬೆಳಿಗ್ಗೆ ಮಾರುಕಟ್ಟೆಯಲ್ಲಿ ಗಸ್ತು ತಿರುಗುತ್ತಾ ಜನತೆಗೆ ಎಚ್ಚರಿಕೆ ನೀಡುತ್ತಿದ್ದರು. ಸಂಜೆಯೂ ವಾಯುವಿಹಾರ ಮಾಡಲು ಬಂದವರನ್ನು ವಾಪಾಸ್ ಕಳುಹಿಸುತ್ತಿದ್ದರು.

ಸೋಂಕು ದಿನೇ ದಿನೇ  ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಸರ್ಕಸ್ ಮಾಡುತ್ತಿರುವ ಸರ್ಕಾರ ನೈಟ್ ಕರ್ಫ್ಯೂ ಜೊತೆ ಬಿಗಿ ಕ್ರಮಗಳನ್ನೂ ತೆಗೆದುಕೊಂಡಿದೆ.  ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅವಕಾಶವಿದೆ. ವಾರಾಂತ್ಯದ ಕರ್ಫ್ಯೂ ವೇಳೆ ಕಾರಣ ಇಲ್ಲದೆ ಜನರು ಹೊರ ಬಂದರೆ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ.

ಜಿಲ್ಲಾದ್ಯಂತ ಬಿಗಿ  ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪ್ರತಿ ತಾಲ್ಲೂಕಿಗೂ ಒಂದೊಂದು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಅನಗತ್ಯವಾಗಿ ಅಡ್ಡಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.

error: Content is protected !!