ಶಿವ ಬ್ಯಾಂಕ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಐಗೂರು ಚಂದ್ರಶೇಖರ್

ಶಿವ ಬ್ಯಾಂಕ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಐಗೂರು ಚಂದ್ರಶೇಖರ್ - Janathavaniದಾವಣಗೆರೆ,ಏ.23- ಜಿಲ್ಲೆಯ ಸಹಕಾರಿ ಬ್ಯಾಂಕುಗಳಲ್ಲೊಂದಾದ ನಗರದ ಶಿವ ಸಹಕಾರಿ ಬ್ಯಾಂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅದೇ ಬ್ಯಾಂಕಿನ ಉಪಾಧ್ಯಕ್ಷರಾಗಿರುವ ಐಗೂರು ಸಿ. ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.

ಬ್ಯಾಂಕಿನ ನಿರ್ದೇಶಕ ಬಿ.ಎಸ್. ಪ್ರಕಾಶ್, ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಂ.ಜಿ. ರಾಜಶೇಖರಯ್ಯ, ಹಿರಿಯ ನ್ಯಾಯವಾದಿ ಎನ್.ಟಿ. ಮಂಜುನಾಥ್, ಸಹಕಾರ ಸಂಘಗಳ ಇಲಾಖೆಯ ನಿವೃತ್ತ ಜಂಟಿ ನಿಬಂಧಕ ಬಿ. ಕುಬೇರಪ್ಪ ಅವರುಗಳು ಈ ಸಮಿತಿಯ ಸದಸ್ಯರುಗಳಾಗಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದನ್ವಯ 5 ಜನ ಸದಸ್ಯರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ತನ್ನ ಕಾರ್ಯವನ್ನು ಇಂದು ಸಭೆ ನಡೆಸುವುದರ ಮೂಲಕ ಕಾರ್ಯಾರಂಭ ಮಾಡಿತು.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ನೂತನ ಸಮಿತಿಯ ಅಧ್ಯಕ್ಷ ಐಗೂರು ಚಂದ್ರಶೇಖರ್, ತಮ್ಮ ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿಯ ಸಲಹೆ – ಸೂಚನೆಗಳು ಶಿವ ಸಹಕಾರಿ ಬ್ಯಾಂಕಿಗೆ ದಾರಿ ದೀಪವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಬ್ಯಾಂಕಿನ ಶಾಖೆಯನ್ನು ಬ್ಯಾಡಗಿಯಲ್ಲಿ ಆರಂಭಿಸಲು ಆರ್.ಬಿ.ಐ. ಅನುಮತಿ ನೀಡಿದ್ದು, ಶೀಘ್ರದಲ್ಲೇ ಬ್ಯಾಡಗಿಯಲ್ಲಿ ಶಾಖೆಯನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬ್ಯಾಂಕಿನ ವ್ಯವಹಾರದ ಸಮಯವನ್ನು ಇಂದಿನಿಂದ ಅನ್ವಯವಾಗುವಂತೆ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 4ರವರೆಗೆ ನಿಗದಿಪಡಿಸಲಾಗಿದ್ದು, ಇದು ಮುಂದಿನ ಆದೇಶದವರೆಗೂ ಇರುತ್ತದೆ ಎಂದು ಅವರು ಹೇಳಿದರು.

ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿರುವ ಬ್ಯಾಂಕಿನ ಸದಸ್ಯರು, ಗ್ರಾಹಕರು, ಠೇವಣಿದಾರರು ಬ್ಯಾಂಕಿನ ಸೇವಾ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವುದರ ಮೂಲಕ ಬ್ಯಾಂಕನ್ನು ಅಭಿವೃದ್ಧಿಪಡಿಸುವಂತೆ ಬ್ಯಾಂಕಿನ ಅಧ್ಯಕ್ಷ ಎಂ.ಬಿ.ಸಂಗಮೇಶ್ವರ ಗೌಡರು ತಿಳಿಸಿದ್ದಾರೆ.

error: Content is protected !!