ದಾವಣಗೆರೆ, ಅ.15- ಗ್ರಾಮೀಣ ರೈತರ ಜಮೀನಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಕುಂದುಕೊರತೆ ಸಭೆ ಕರೆಯಲಾಗಿತ್ತು.
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದು ಜಮೀನಿನ ಸಂಬಂಧ ಇರುವ ಸಮಸ್ಯೆಗಳನ್ನು ಹೇಳಿಕೊಂಡರು.
ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರು, ವೈಯಕ್ತಿಕವಾಗಿ ಪ್ರತಿಯೊಬ್ಬರ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸಿ, ಈ ತಿಂಗಳ ಅಂತ್ಯದೊಳಗೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಭೂ ವ್ಯಾಜ್ಯ, ಪೋಡಿ ಪ್ರಕರಣಗಳು, ಪಾರಿಕತ್ ಪಾಲುವಿಭಾಗ, ಜಮೀನಿನಲ್ಲಿ ದಾರಿ ಬಿಟ್ಟು ಕೊಡದಿರುವುದು ಸೇರಿದಂತೆ ಇತರೆ ವ್ಯಾಜ್ಯಗಳನ್ನು ಶೀಘ್ರವೇ ಇತ್ಯರ್ಥಪಡಿಸಲು ಸಭೆಯಲ್ಲಿ ಹಾಜರಿದ್ದ ಸರ್ವೇ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಡಿಎಲ್‌ಆರ್ ರೋಹಿತ್, ಶಿರಸ್ತೇದಾರ್ ಶಕೀಲ್ ಅಹ್ಮದ್ ಸೇರಿದಂತೆ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ರೈತರ ಸಭೆಯಲ್ಲಿದ್ದು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ರೈತ ಮುಖಂಡರಾದ ಬುಳ್ಳಾಪುರದ ಹನುಮಂತಪ್ಪ, ಈಚಘಟ್ಟದ ಕರಿಬಸಪ್ಪ, ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ತುಪ್ಪದಹಳ್ಳಿ ಬಸವರಾಜಪ್ಪ, ಬಸಪ್ಪ, ತಿಪ್ಪಣ್ಣ ಮತ್ತಿತರರು ಉಪಸ್ಥಿತರಿದ್ದರು.