ಅರಣ್ಯ ಇಲಾಖೆಗೆ ಒಪ್ಪಿಸಿದ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು
ದಾವಣಗೆರೆ, ಅ.11- ತಾಲ್ಲೂಕಿನ ಹಳೇಬಾತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲಾನಹಳ್ಳಿ ಗ್ರಾಮದಲ್ಲಿನ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬೆಳೆದಿರುವ ಬೆಲೆ ಬಾಳುವ ಹಳೇ ಮರಗಳನ್ನು ಅಕ್ರಮವಾಗಿ ಕಡಿದು ಕಳ್ಳ ಸಾಗಾಟ ಮಾಡುತ್ತಿದ್ದುದನ್ನು ಹಳೇಬಾತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ತಡೆದು, ಕಡಿದ ಮರಗಳ ತುಂಡುಗಳನ್ನು ಟ್ರ್ಯಾಕ್ಟರ್ ಸಹಿತ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.
ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಯಾ ರೋ ದುಷ್ಕರ್ಮಿಗಳು ಸುಮಾರು 50ಕ್ಕೂ ಹೆಚ್ಚು ಮರಗಳನ್ನು ಕಳೆದ ಐದಾರು ದಿನಗಳಿಂದ ಕಡಿದು ಹಾಕಿದ್ದಾರೆ. 3-4 ದಿನಗಳಿಂದ ಟ್ರ್ಯಾಕ್ಟರ್ನಲ್ಲಿ ಸಾಗಿಸುತ್ತಿದ್ದ ಬಗ್ಗೆ ಗ್ರಾಮಸ್ಥರು ಹಳೇಬಾತಿ ಪಂಚಾಯಿತಿ ಗಮನಕ್ಕೆ ತಂದರು. ತಕ್ಷಣವೇ ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಕಡಿದಿದ್ದ ಮರಗಳನ್ನು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ತಡೆದು ಅದನ್ನು ನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ತಂದೊಪ್ಪಿಸಿದ್ದಾರೆ. ಹಳೇ ಬಾತಿ ಗ್ರಾಮದ ಸರ್ಕಾರಿ ಖರಾಬು ಜಾಗದಲ್ಲಿ ಲೀಸ್ ಗೆ ನೀಡಲಾಗಿರುವ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗ್ರಾಮಸ್ಥರು ಪರಿಸರ ಅಭಿವೃದ್ಧಿಗಾಗಿ ಬೆಳೆಸಿದ್ದ ಬೆಲೆ ಬಾಳುವ ಸಾವಿರಾರು ಮರಗಳ ಪೈಕಿ 50ಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ಕಡಿದು ಕಳ್ಳ ಸಾಗಾಣೆ ಮಾಡಲಾಗುತ್ತಿತ್ತು. ಈ ಸಂಬಂಧ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಹಳೆಬಾತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ತಿಳಿಸಿದ್ದಾರೆ.
ತಕ್ಷಣವೇ ಮರ ಕಡಿಯುವುದಕ್ಕೆ ಕಡಿವಾಣ ಹಾಕಬೇಕು. ಹುಣಸೇಮರ, ನೀಲಗಿರಿ ಮರಗಳು, ದ್ವಾರುಣಸಿಕಾಯಿ ಮರ ಸೇರಿದಂತೆ ವಿವಿಧ ಜಾತಿಗಳ ದೊಡ್ಡ ದೊಡ್ಡ ಮರಗಳನ್ನು ಯಾರ ಅನುಮತಿಯನ್ನೂ ಪಡೆಯದೇ, ಅರಣ್ಯ ಇಲಾಖೆ ಗಮನಕ್ಕೂ ತಾರದೇ ಹನನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಡಿದ ಮರಗಳನ್ನು ವಿಜಯ ನಗರ ಜಿಲ್ಲೆಯತ್ತ ಕೊಂಡೊಯ್ಯಲಾಗಿದ್ದು, ಕಡಿದಿದ್ದ ಮರಗಳನ್ನು ಇಂದು ಸಾಗಿಸುತ್ತಿದ್ದ ವೇಳೆ ನಾವೆಲ್ಲಾ ಗ್ರಾಮಸ್ಥರು ತಡೆ ಹಿಡಿದಿದ್ದೇವೆ. ಮೂರ್ನಾಲ್ಕು ದಿನಗಳಿಂದಲೂ ಇದೇ ರೀತಿ ಮರಗಳನ್ನು ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಹೋಗಿದ್ದು, ಅವುಗಳನ್ನು ಎಲ್ಲಿಗೆ ಒಯ್ದಿದ್ದಾರೋ ಅಲ್ಲಿಂದ ಜಪ್ತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.