ಒಂದೇ ಸೆಮಿಸ್ಟರ್‌ನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರದಂತೆ ಆಗ್ರಹ

ದಾವಣಗೆರೆ, ಜು.12- ಒಂದು ಸೆಮಿಸ್ಟರ್‌ನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರದಂತೆ ಆಗ್ರಹಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.

ಇಲ್ಲಿನ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ಜಮಾಯಿಸಿದ್ದ ಸಂಘಟನೆ ಮುಖಂಡರು, ವಿದ್ಯಾರ್ಥಿಗಳು ಒಂದು ಸೆಮಿಸ್ಟರ್‌ನಲ್ಲಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆಯ ಒತ್ತಡ ಹಾಕದಂತೆ ಒತ್ತಾಯಿಸಿ, ವಿಶ್ವವಿದ್ಯಾಲಯದ ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಸರ್ಕಾರ ನಮ್ಮ ಬೇಡಿಕೆಗಳಿಗೆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಿಂದಿನ ಸೆಮಿಸ್ಟರ್ ಪರೀಕ್ಷೆ ನಡೆಸುವುದನ್ನು ಕೈ ಬಿಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಡೋಸ್ ಉಚಿತ ಲಸಿಕೆ ನೀಡುವವರೆಗೂ ಆಫ್‌ಲೈನ್ ತರಗತಿ, ಪರೀಕ್ಷೆಗಳನ್ನು ನಡೆಸಬಾರದು ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಕುಲಸಚಿವರಾದ (ಮೌಲ್ಯಮಾಪನ) ಡಾ. ಹೆಚ್.ಎಸ್. ಅನಿತಾ ಮಾತನಾಡಿ, ಈಗ ಹೊರಡಿಸಿರುವ ಪರೀಕ್ಷಾ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಈ ಬಗ್ಗೆ ಯಾರೂ ಆತಂಕ ಪಡುವುದು ಬೇಡ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಗೂ ಸರ್ಕಾರದ ಆದೇಶದ ಮೇಲೆ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪುಷ್ಪ, ಇಸ್ಮಾಯಿಲ್, ವಿದಾರ್ಥಿಗಳಾದ ಉದಯ್ ಕುಮಾರ್, ಶಿವಕುಮಾರ್, ಪ್ರೀತಮ್, ತಿಪ್ಪೇಶ್, ಗಿರೀಶ್, ದಿನೇಶ್ ಸೇರಿದಂತೆ ಇತರರು ಇದ್ದರು.

error: Content is protected !!