ಕೂಡ್ಲಿಗಿ, ಜು.10- ಕೋವಿಡ್‌ನಿಂದ ನೊಂದ ಜನ ಸಾಮಾನ್ಯರ ಮೇಲೆ ಕರುಣೆ ಇಲ್ಲದೆ ತೆರಿಗೆ ಹೇರಿ ವಸೂಲಿ ಮಾಡುವುದು ಬಿಜೆಪಿ ಸರ್ಕಾರದ ಮಹಾಸಾಧನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಯು.ಟಿ. ಖಾದರ್ ಟೀಕಿಸಿದರು.
ಪಟ್ಟಣದ ಶ್ರೀ ವಾಸವಿ ಶಾಲಾ ಆವರಣದಲ್ಲಿ ನಿನ್ನೆ ಸಂಜೆ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋ ಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಯಾರನ್ನೋ ಉದ್ಧಾರ ಮಾಡಲು ಹೋಗಿ ಸೇಲ್ ಇಂಡಿಯಾ ಸರ್ಕಾರವಾಗಿ ಬಿಟ್ಟಿದೆ. ಕಾಂಗ್ರೆಸ್ ಆಡಳಿತದಲ್ಲಿರುವಾಗ ಬರೀ ಶೇ.9 ತೆರಿಗೆ ಮಾತ್ರ ಜನರಿಂದ ವಸೂಲಿ ಮಾಡುತ್ತಿತ್ತು. ಆದರೆ ಈಗ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನಸಾಮಾನ್ಯರ ಮೇಲೆ ಶೇ. 35 ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ ಎಂದು ಅವರು ಕಿಡಿ ಕಾರಿದರು.
ಮಾಜಿ ಸಿಎಂ ಧರಂಸಿಂಗ್ ಪುತ್ರ ವಿಜಯಸಿಂಗ್ ಮಾತನಾಡಿ, ಜನಸಾಮಾನ್ಯರ ನೆಮ್ಮದಿ ಬದುಕಿಗೆ ಮುಂದಾಗಬೇಕೇ ಹೊರತು ಬರೀ ಅಂಬಾನಿ, ಅದಾನಿ ಸರ್ಕಾರವಾಗಬಾರದು ಎಂದು ಕಿಚಾಯಿಸಿದರು.
ಮಾಜಿ ಶಾಸಕ ಸಿರಾಜ್ ಶೇಖ್ ಹಾಗೂ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಶಿವಯೋಗಿ, ಗುಜ್ಜಲ್ ರಾಘು, ಆರ್. ಮಂಜುನಾಥ್, ಬಳ್ಳಾರಿ ರಫೀಕ್, ಆಶಾಲತಾ, ಗುಜ್ಜಲ್ ನಾಗರಾಜ ನಾಗಮಣಿ, ಗುರುಸಿದ್ಧನಗೌಡ, ಕಾವಲಿ ಶಿವಪ್ಪನಾಯಕ, ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಯೂರ ಇನ್ನಿತರರು ಉಪಸ್ಥಿತರಿದ್ದರು.