ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದಿಢೀರನೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಾಗಿ ಹೇಳಿರುವುದು ಮಕ್ಕಳಲ್ಲಿ, ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಜೀವ ಇದ್ದರೆ ಜೀವನ… ಜೀವನ ಇದ್ದರೆ ಬದುಕು. ಈ ವಿಷಯ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ಭಯಾನಕ ಪೀಡೆಯಿಂದ ಪಾರಾದರೆ ಸಾಕು ಎಂದೆನಿಸಿರುವಾಗ ಪರೀಕ್ಷೆಯ ಅನಿವಾರ್ಯತೆ ಇದೆಯೇ?
ಈ ಸೋಂಕಿನಿಂದ ಪಾರಾಗಲು ಇಡೀ ರಾಷ್ಟ್ರವೇ ಪಣ ತೊಟ್ಟು ನಿಂತಿರುವಾಗ, ಸಣ್ಣ ಒಂದು ಸಡಿಲಿಕೆ… ಆಹಾರದ ಕಿಟ್ ವಿತರಿಸುವುದಾಗಲೀ, ಉಚಿತ ಹಾಲು ಕೊಡುವಾಗ, ಮದ್ಯದ ಮಾರಾಟ ಆರಂಭಿಸಿದಾಗ, ನಾಗರಿಕರ ಬೇಜವಾಬ್ದಾರಿತನದಿಂದ, ಗುಟ್ಕಾ ಮಾರಾಟ ಶುರು ಮಾಡಿ ಕೆಲಸಗಾರರು ದುಡಿದುಕೊಳ್ಳಲಿ ಎಂದರೆ ಅದನ್ನೇ ಜಗಿದು ಎಲ್ಲೆಂದರಲ್ಲಿ ಉಗುಳುವುದು, ಪಾನಮತ್ತರಾಗಿ ತಮ್ಮ ದುರ್ನಡತೆ ತೋರಿಸುವುದು, ಒಂದಾ… ಎರಡಾ…? ರಕ್ಷಣೆ ಮಾಡುವ ಪುಣ್ಯಾತ್ಮರು ಎಷ್ಟು ಅಂತ ಮಾಡ್ತಾರೆ? ತಮ್ಮ ಪ್ರಾಣ ಪಣಕ್ಕಿಟ್ಟು ಎಷ್ಟು ಅಂತ ಹೋರಾಡ್ತಾರೆ? ಅದರ ಮಧ್ಯೆ ಈ ಪರೀಕ್ಷೆ… ಇಲಾಖೆಯ ಅಧಿಕಾರಿಗಳು ಯಾವುದನ್ನು ಮುಖ್ಯ ಎಂದು ಪರಿಗಣಿಸಬೇಕು/ ಯಾವುದಕ್ಕೆ ಆದ್ಯತೆ ಕೊಡಬೇಕು? ಇದರಲ್ಲಿ ಸರ್ಕಾರ, ಇಲಾಖೆ, ಪೋಷಕರು, ಶಿಕ್ಷಕರು, ಮುಖ್ಯವಾಗಿ ವಿದ್ಯಾರ್ಥಿಗಳು… ಎಲ್ಲರ ಪಾತ್ರವಿದೆ.
ಓದಿನ ಕಡೆ ಗಮನ ಹರಿಸಬೇಕಾ? ಆರೋಗ್ಯದ ಕಡೆ ಗಮನ ಹರಿಸಬೇಕಾ? ಎನ್ನುವ ತೊಳಲಾಟದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಏನು ಮುಟ್ಟಿದರೆ ಕೊರೊನಾ ಅಂಟಿಕೊಳ್ಳುತ್ತೋ ಎನ್ನುವ ಸಂದಿಗ್ಧತೆಯಲ್ಲಿ ಅನಾಹುತಗಳಾಗುವ ಸಂಭವವೇ ಜಾಸ್ತಿ…
ಆದರೆ ಸರ್ಕಾರ ಇದರ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಈಗಿನ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರದ ವ್ಯವಸ್ಥೆಯ ಬಗ್ಗೆ ಹೆಮ್ಮೆಯಿದೆ. ಇಡೀ ಪ್ರಪಂಚವೇ ನಮ್ಮ ರಾಷ್ಟ್ರದತ್ತ ತಿರುಗಿ ನೋಡುವಂತೆ ಮಾಡಿದ ಸರ್ಕಾರದ ಬಗ್ಗೆ ಗೌರವ, ಅಭಿಮಾನವಿದೆ. ಆದರೆ ಪರೀಕ್ಷಾ ಕೇಂದ್ರಗಳಲ್ಲಿ ಒಬ್ಬ ವ್ಯಕ್ತಿ ಸೋಂಕಿತನಿದ್ದರೆ… ಉಳಿದ ಎಲ್ಲರ ಜೀವಕ್ಕೆ ಕುತ್ತು ಎದುರಾಗುತ್ತದೆ. ಒಂದು ಆರು ತಿಂಗಳು ಇಲ್ಲವೇ ಒಂದು ವರ್ಷದ ಭವಿಷ್ಯಕ್ಕಿಂತ ಇಡೀ ಜೀವಮಾನದ ಬದುಕು ಮುಖ್ಯ ಅಲ್ಲವೇ…?
ಪರೀಕ್ಷೆಯೆಂದರೆ ಶಾಂತ ಪರಿಸರದಲ್ಲಿ ಆತಂಕ ರಹಿತ ವಾತಾವರಣದಲ್ಲಿ ಬರೆದು ಉತ್ತಮ ಅಂಕಗಳಿಸಿ ತಮ್ಮ ಭವ್ಯ ಭವಿಷ್ಯದ ಕನಸು ಕಾಣುವ ವ್ಯವಸ್ಥೆ. ಆದರೆ ಈಗ ಕನಸು ನನಸಾಗುವ ಸಾಧ್ಯತೆ ಇದೆಯೇ?
3 ಗಂಟೆಗಳ ಕಾಲ ಮಕ್ಕಳು ಪರೀಕ್ಷೆ ಬರೆಯುವಾಗ, ಲಕ್ಷಾಂತರ ಪೋಷಕರು ಪರೀಕ್ಷಾ ಕೇಂದ್ರದ ಸುತ್ತಮುತ್ತ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಸಾಧ್ಯವೇ ಸರಿ.
ಆರ್ಥಿಕ ಮುಗ್ಗಟ್ಟು ಎದುರಿಸಿದರೂ ಪರವಾಗಿಲ್ಲ, ಜನತೆಯ ಆರೋಗ್ಯ ಮುಖ್ಯ ಎಂದು ಜನರ ರಕ್ಷಣೆಗೆ ಮುಂದಾಗಿರುವ ಸರ್ಕಾರ ಮಕ್ಕಳ ಭವಿಷ್ಯದ ಬಗ್ಗೆ ಯಾಕೆ ಯೋಚಿಸಬಾರದು?
ಲಾಕ್ಡೌನ್ನಿಂದ ಸುಮ್ಮನೆ ಮನೆಯಲ್ಲಿ ಕುಳಿತಿರುವ ನಮಗೆ ಕ್ಷಣಕ್ಷಣದ ಆಘಾತಕಾರಿ ಸುದ್ದಿಗಳಿಂದ ಜರ್ಜಿತರಾಗಿರುವ ಹಿನ್ನೆಲೆಯಲ್ಲಿ ಪಣತೊಟ್ಟು ಹೋರಾಡುತ್ತಿರುವವರ ತಾಳ್ಮೆಗೆ ಒಂದು ಮಿತಿಯಿದೆ. ಒಂದೊಂದನ್ನೇ ವ್ಯವಸ್ಥಿತವಾಗಿ ಮಾಡುವಾಗ ಇನ್ನೊಂದು ಸಮಸ್ಯೆ ಎದುರಾದಾಗ…. ಅವರು ತಾನೇ ಏನು ಮಾಡ್ತಾರೆ..?
ಒಂದು ಅಮ್ಮ ಕೋತಿ ಪ್ರವಾಹಕ್ಕೆ ಸಿಲುಕಿ, ಅದರ ಜೊತೆ ತನ್ನ ಮರಿ ಕೋತಿಯನ್ನು ಅಪ್ಪಿಕೊಂಡು ಈಜಿ ಸಾಹಸ ಮಾಡುತ್ತಿರುವಾಗ, ಮರಿಯನ್ನು ನೀರು ಬಂದ ಹಾಗೆ ಕೈಯಿಂದ ಭುಜದ ಮೇಲೆ, ಭುಜದಿಂದ ತಲೆಯ ಮೇಲೆ, ತಲೆಯಿಂದ ತನ್ನ ಕೈಗಳನ್ನು ಮೇಲಕ್ಕೆ ಎತ್ತಿ ಹಿಡಿದು, ಕೊನೆಗೆ ಸಾಕಾಗಿ, ತಾಳ್ಮೆಯ ಕಟ್ಟೆಯೊಡೆದು ಛೇ, ನಾನು ಉಳಿದರೆ ಇಂತಹ ನೂರು ಮರಿಗಳನ್ನು ಹೆರಬಹುದು… ಎಂದು ಯೋಚಿಸಿ ಮರಿಯನ್ನು ಬಿಟ್ಟು, ಈಜಿ ದಡ ಸೇರಿ ಪಾರಾಯಿತಂತೆ.
ಹಾಗೆಯೇ ನಮ್ಮನ್ನು ರಕ್ಷಿಸುವವರಿಗೂ ಒಂದು ತಾಳ್ಮೆಯಿದೆ. ಅವರೂ ಮನುಷ್ಯರು. ಬರೀ ಅನಾವಶ್ಯಕವಾಗಿ ಓಡಾಡಬೇಡಿ ಎಂದು ಬೇಡಿಕೊಂಡರೂ, ಪೊಲೀಸರು ವಾಹನಗಳಲ್ಲಿ ತಿರುಗುತ್ತಾ ಬೈದರೂ, ಹೊಡೆದರೂ, ಮಾತು ಕೇಳದ ನಮ್ಮ ನಾಗರಿಕ ಸಮಾಜದವರು, ಇದು ತಮಗಲ್ಲವೆನ್ನುವಂತೆ ಬೀದಿ ಬೀದಿ ಸುತ್ತುತ್ತಿದ್ದಾರೆ. ವಾಕ್ ಮಾಡುತ್ತಿದ್ದಾರೆ, ಹಾಳು ಹರಟೆ ಹೊಡೆಯುತ್ತಿದ್ದಾರೆ (ಸಾಮಾಜಿಕ ಅಂತರ ಕಾಪಾಡದೇ)… ಇವರಿಗೆಲ್ಲಾ ಇನ್ನೂ ಯಾವಾಗ ಬುದ್ದಿ ಬರುತ್ತೋ ಗೊತ್ತಿಲ್ಲ.
ನಮ್ಮ ರಕ್ಷಣೆಗಾಗಿ ನಿಂತ ಮಹಾತ್ಮರುಗಳ ತಾಳ್ಮೆಯನ್ನು ಪರೀಕ್ಷೆ ಮಾಡುವುದು ಬೇಡ. ಕೋತಿಯ ಕತೆಯ ನೀತಿಯಂತೆ ಅವರೇನಾದರೂ ಕೈ ಚೆಲ್ಲಿದರೆ ನಮಗೆ ಯಾರು ಗತಿ? ಸ್ವಲ್ಪ ಸಮಯದವರೆಗೆ ಅವರ ಪ್ರಯತ್ನಕ್ಕೆ ಜನ ಸಾಮಾನ್ಯರೆಲ್ಲರೂ ಕೈ ಜೋಡಿಸೋಣ… ಅವರಿಗಾಗಿ ಪ್ರಾರ್ಥಿಸೋಣ… ಈ ವಿಷ ಜಂತುವಿನ ವಿರುದ್ಧ ಹೋರಾಡುವಲ್ಲಿ ನಮ್ಮ ಅಳಿಲು ಸೇವೆ ಸಲ್ಲಿಸೋಣ. ಪರೀಕ್ಷೆಗಳನ್ನು ಸ್ವಲ್ಪ ಶಾಂತ ಪರಿಸರದಲ್ಲಿ ನಡೆಸುವುದು ಸರಿಯಲ್ಲವೇ?
– ಡಾ. ಅನಿತಾ ಹೆಚ್. ದೊಡ್ಡಗೌಡರ್,
ದಾವಣಗೆರೆ.
9902198655
[email protected]