ದಾವಣಗೆರೆ, ಮೇ 9 – ಟ್ರ್ಯಾಕಿಂಗ್, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‍ಮೆಂಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲಾಗುತ್ತಿದೆ. ಕೊರೊನಾ ನಿಯಂತ್ರಣ ಕೇವಲ ಸರ್ಕಾರದ ಕೈಯ್ಯಲ್ಲಿಲ್ಲ ಬದಲಾಗಿ ಎಲ್ಲ ಜನತೆ ಸಹಕಾರ ಅತ್ಯಗತ್ಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದ ಕ್ರಮಗಳು ಮತ್ತು ಜನರ ಸಹಕಾರದಿಂದ ಮಾತ್ರ ಕೊರೊನಾ ನಿಗ್ರಹ ಸಾಧ್ಯ ಎಂದು ಹೇಳಿದರು.
ಕೊರೊನಾವನ್ನು ಸೋಲಿಸಲು ಸ್ವಲ್ಪ ಸಮಯ ಬೇಕು. ಆದ ಕಾರಣ ಜನರು ಅಂತರ ಕಾಯ್ದುಕೊಳ್ಳುವ ಮೂಲಕ, ಸ್ವಚ್ಚತೆ, ಮಾಸ್ಕ್ ಧರಿಸುವ ಮೂಲಕ ಹಾಗೂ ಸರ್ಕಾರದ ನಿಯಮ, ಸೂಚನೆಗಳನ್ನು ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೊರೊನಾ ನಿಗ್ರಹ ಹಿನ್ನೆಲೆ ರಾಜ್ಯದಲ್ಲಿರುವ 60 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಲ್ಯಾಬ್ ಸ್ಥಾಪಿಸಲು ಸರ್ಕಾರ ಈಗಾಗಲೇ ಆದೇಶಿಸಿದ್ದು, ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಯಲ್ಲಿ 2 ಪರೀಕ್ಷಾ ಲ್ಯಾಬ್ ಸಿದ್ದಗೊಳ್ಳುವ ವಿಶ್ವಾಸವಿದೆ ಎಂದರು.
ವೈದ್ಯರು ಮತ್ತು ಹೌಸ್ ಸರ್ಜನ್‍ಗಳ ಸೇವೆ ದೊಡ್ಡದಾಗಿದ್ದು, ದಾವಣಗೆರೆಯ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿರುವ ಹೌಸ್ ಸರ್ಜನ್ ಮತ್ತು ಪಿಜಿ ವಿದ್ಯಾರ್ಥಿಗಳಿಗೆ 18 ತಿಂಗಳಿಂದ ಶಿಷ್ಯ ವೇತನ ಬಂದಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಭತ್ಯೆ ಪಾವತಿಯಾದ ಬಗ್ಗೆ ಆಡಿಟ್ ಆಕ್ಷೇಪಣೆ ಹಿನ್ನೆಲೆಯಲ್ಲಿ ಭತ್ಯೆ ನಿಲ್ಲಿಸಲಾಗಿದೆ. ಈ ಬಗ್ಗೆ ಚರ್ಚಿಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಮಾತನಾಡಿ, ಕೊರೊನಾ ನಿಗ್ರಹಕ್ಕಾಗಿ ಯುದ್ದೋಪಾದಿಯಲ್ಲಿ ಕೆಲಸ ನಡೆಯಬೇಕಿದ್ದು, ಜನರೂ ಸಹಕರಿಸಬೇಕು. ಕ್ವಾರಂಟೈನ್‍ನಲ್ಲಿರುವವರಿಗೆ ಮುತುವರ್ಜಿಯಿಂದ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ನಿಗಾವಣೆ ಆಗಬೇಕು. ಹೊನ್ನಾಳಿ, ನ್ಯಾಮತಿಯಿಂದ ತರಕಾರಿ ಮತ್ತು ಆಸ್ಪತ್ರೆಯ ಸೇವೆಗಳಿಗೆ ಪಾಸ್ ಕೇಳಲಾಗುತ್ತಿದೆ. ಅದನ್ನು ಎಸ್‍ಪಿ ಮತ್ತು ಡಿಸಿಯವರು ಒದಗಿಸಿಕೊಡಬೇಕು. ಶಿವಮೊಗ್ಗಕ್ಕೂ ಕೂಡ ಈ ಕಾರಣಗಳಿಗೆ ಪಾಸ್ ನೀಡಿ ಕಳುಹಿಸಲಾಗುತ್ತಿದೆ