ಹೋಟೆಲ್ ಉದ್ಯಮ ಪರವಾನಗಿ ಮೇಳಕ್ಕೆ ಚಾಲನೆ ನೀಡಿದ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್
ದಾವಣಗೆರೆ, ಏ.20- ನಗರದ ಅಭಿವೃದ್ದಿಗೆ ಹೋಟೆಲ್ ಉದ್ದಿಮೆದಾರರ ಪಾತ್ರ ಮಹತ್ವದ್ದು ಎಂದು ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಅಪೂರ್ವ ರೆಸ್ಟೋರೆಂಟ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ `ಉದ್ಯಮ ಪರವಾನಗಿ ಮೇಳ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಾಣಿಜ್ಯ ನಗರಿ ಹಾಗೂ ವಿದ್ಯಾನಗರಿ ಎಂದು ಗುರುತಿಸಿ ಕೊಂಡಿರುವ ದಾವಣಗೆರೆ ಯಲ್ಲಿ ಹೋಟೆಲ್ ಉದ್ದಿಮೆ ದಾರರು ಹೆಚ್ಚಿನ ಸಂಖ್ಯೆಯಲ್ಲಿ ದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಿಂದ ವಾಣಿಜ್ಯ, ಶೈಕ್ಷಣಿಕ ಸೇರಿದಂತೆ ಮತ್ತಿತರೆ ಕೆಲಸಗಳಿಗೆ ಜನರು ನಗರಕ್ಕೆ ಬಂದು ಹೋಗುತ್ತಾರೆ. ಇವರೆಲ್ಲರಿಗೂ ಊಟ, ವಸತಿ ನೀಡುವ ಕೆಲಸವನ್ನು ಹೋಟೆಲ್ ಉದ್ದಿಮೆಗಳು ಮಾಡುತ್ತಿವೆ. ಆ ಮೂಲಕ ದಾವಣಗೆರೆ ನಗರದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ನಗರದ ನಾಗರಿಕರ ಆರೋಗ್ಯ ಕಾಪಾಡುವ ಹಾಗೂ ಅವರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಮಹಾನಗರ ಪಾಲಿಕೆಯ ಜವಾಬ್ದಾರಿ. ಈ ವ್ಯವಸ್ಥೆಯು ಅನೇಕ ಹಂತದಲ್ಲಿ ನಡೆಯುತ್ತದೆ ಎಂದ ಮೇಯರ್, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಗರದ ಸ್ವಚ್ಛತೆ ನೋಡಿಕೊಳ್ಳುವುದು ಹಾಗೂ ಉದ್ದಿಮೆದಾರರಿಗೆ ಟ್ರೇಡ್ ಲೈಸನ್ಸ್ ನೀಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಹೋಟೆಲ್ ಉದ್ದಿಮೆದಾರರಿಗೆ ಮಂಗಳೂರು ಹಾಗೂ ಮೈಸೂರು ಮಾದರಿಯಲ್ಲಿ ಸರಳವಾಗಿ ಟ್ರೇಡ್ ಲೈಸನ್ಸ್ ನೀಡುವ ಬಗ್ಗೆ ಸಂಘದವರು ಸಲಹೆ ನೀಡಿದ್ದರು. ನಾನು ಈ ಬಗ್ಗೆ ಪಾಲಿಕೆ ಆಯುಕ್ತರೊಂದಿಗೆ ಮಾತನಾಡಿದೆ. ಅವರಿಗೂ ಈ ಸಲಹೆ ಸೂಕ್ತವೆನಿಸಿ, ಒಪ್ಪಿಕೊಂಡಾಗ, ಇಂತಹದ್ದೊಂದು ಮೇಳ ಆಯೋಜಿಸಲು ಸಾಧ್ಯವಾಯಿತು. ಆರಂಭದಲ್ಲಿ ಈ ಪರವಾನಗಿ ಮೇಳ ನಿರೀಕ್ಷಿತ ಸಫಲತೆ ಪಡೆಯದಿದ್ದರೂ, ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿ ನಡೆಯಲಿದೆ ಎಂದು ಹೇಳಿದರು.
ಕೊರೊನಾ ಲಾಕ್ಕಡೌನ್ ವೇಳೆ ಹೆಚ್ಚು ಸಂಕಷ್ಟ ಅನುಭವಿಸಿದ್ದೇ ಹೋಟೆಲ್ ಉದ್ದಿಮೆದಾರರು. ದೊಡ್ಡ ಹೋಟೆಲ್ನವರು ದೊಡ್ಡ ಮಟ್ಟದ ಸಂಕಷ್ಟ ಅನುಭವಿಸಿದರೆ, ಚಿಕ್ಕ ಹೋಟೆಲ್ನವರು ಸಣ್ಣ ಪ್ರಮಾಣದ ಸಂಕಷ್ಟ ಅನುಭವಿಸಿದ್ದಾರೆ. ಆದರೂ ಆರಂಭದ ದಿನಗಳಲ್ಲಿ ಸಾಕಷ್ಟು ಬಡ ಜನತೆಗೆ ಆಹಾರದ ಕಿಟ್ ವಿತರಿಸಿ ನೆರವಾಗಿದ್ದಾರೆ. ಮನರಂಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಧನ ಸಹಾಯ ಮಾಡಿದ್ದಾರೆ ಎಂದು ಶ್ಲ್ಯಾಘಿಸಿದರು.
ಅನೇಕ ಹೋಟೆಲ್ ಉದ್ದಿಮೆದಾರರು ನನ್ನ ಆತ್ಮೀಯರೇ ಆಗಿದ್ದು, ನಾನೂ ಸಹ ಸಂಘದ ಸದಸ್ಯನೇ ಎಂಬ ಭಾವ ಮೂಡುವಷ್ಟರ ಮಟ್ಟಿಗೆ ನನ್ನ ಒಡನಾಟವಿದೆ. ಮಹಾನಗರ ಪಾಲಿಕೆ ಸದಾ ನಿಮ್ಮೊಟ್ಟಿಗೆ ಇರುತ್ತದೆ ಎಂದು ಭರವಸೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಮತ್ತೆ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದೆ. ಮುಂದೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಿಜಿ ವಹಿಸುವ ಜೊತೆಗೆ, ಕುಟುಂಬ ಹಾಗೂ ಗ್ರಾಹಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಸರ್ಕಾರದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿ ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಗಿ ನವೀಕರಣಕ್ಕೆ ಮೊದಲಿನಂತೆ ಹೆಚ್ಚು ಶ್ರಮ ಪಡಬೇಕಾಗಿಲ್ಲ. ಒಮ್ಮೆ ಪರವಾನಗಿ ಪಡೆದರೆ, ಮುಂದಿನ ವರ್ಷ ಆಟೋಮ್ಯಾಟಿಕ್ ಆಗಿ ಚಲನ್ ಜನರೇಟ್ ಆಗಿ ನಿಮಗೆ ಸಂದೇಶ ಬರುತ್ತದೆ. ನೀವು ಶುಲ್ಕ ಭರ್ತಿ ಮಾಡಿದರೆ ಸಾಕು ನಿಮ್ಮ ಪರವಾನಗಿ ನವೀಕರಣವಾಗುತ್ತದೆ. ಉದ್ದಿಮೆದಾರರು ಇಷ್ಟು ಸರಳವಾದ ಪ್ರಕ್ರಿಯೆಯ ಸದುಪಯೋಗ ಪಡೆದುಕೊಳ್ಳಬೇಕು.
– ವಿಶ್ವನಾಥ ಮುದಜ್ಜಿ, ಪಾಲಿಕೆ ಆಯುಕ್ತ
ದಾವಣಗೆರೆಯಲ್ಲಿ 2018ರಲ್ಲಿ ಸುಮಾರು 270ಕ್ಕೂ ಹೆಚ್ಚು ಹೋಟೆಲ್ಗಳಿದ್ದವು. ಹೋಟೆಲ್ ಉದ್ದಿಮೆದಾರರ ಸಂಘದಲ್ಲಿ 145 ಹೋಟೆಲ್ಗಳ ಮಾಲೀಕರು ಸದಸ್ಯತ್ವ ಪಡೆದಿದ್ದಾರೆ. ಆದರೆ ಲೈಸನ್ಸ್ ಪಡೆದವರು ಅಂದಾಜು 80-90 ಮಾತ್ರ. ಕಳೆದ ಬಾರಿ ಲಾಕ್ಡೌನ್ ವೇಳೆ ಸುಮಾರು 60 ಹೋಟೆಲ್ಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ. ನಂತರ ಸುಮಾರು 30-35 ಹೊಸ ಹೋಟೆಲ್ಗಳು ಆರಂಭವಾಗಿವೆ.
– ಬಿ.ಕೆ. ಸುಬ್ರಹ್ಮಣ್ಯ, ಹೋಟೆಲ್ ಉದ್ದಿಮೆದಾರರ ಸಂಘದ ಕಾರ್ಯದರ್ಶಿ
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಹೋಟೆಲ್ ಉದ್ದಿಮೆದಾರರೂ ಸೇರಿದಂತೆ ಸುಮಾರು 25 ಸಾವಿರ ಉದ್ದಿಮೆದಾರರಿದ್ದಾರೆ. ಮಹಾನಗರ ಪಾಲಿಕೆಗೆ ಇವರು ಆದಾಯದ ಮೂಲವೂ ಹೌದು ಎಂದರು.
ಪ್ರತಿ ವರ್ಷ ಉದ್ದಿಮೆದಾರರು ಪರವಾನಗಿ ನವೀಕರಿಸಿಕೊಳ್ಳಬೇಕಾದ ಅಗತ್ಯವಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ನವೀಕರಣವಾಗುತ್ತಿಲ್ಲ. ಹೊಸದಾಗಿ ಪರವಾನಗಿ ಪಡೆದವರಲ್ಲಿ ನವೀಕರಣದ ಬಗೆಗಿನ ಮಾಹಿತಿ ಕೊರತೆ ಇದೆ. ಪ್ರತಿ ವರ್ಷ ಇಂತಹ ಮೇಳ ನಡೆಸಿ ಮಾಹಿತಿ ನೀಡುವ ಕೆಲಸವಾಗಬೇಕು ಎಂದರು.
ಯಾವುದೇ ಉದ್ಯಮಕ್ಕೆ ಏನಾದರೂ ತೊಂದರೆಯಾದರೆ, ಮೊದಲು ಲೈಸನ್ಸ್ ಇದೆಯಾ? ಎಂದು ಪ್ರಶ್ನಿಸಲಾಗುತ್ತದೆ. ಆದ್ದರಿಂದ ಪರವಾನಗಿ ಮಹತ್ವವನ್ನು ಎಲ್ಲರೂ ಅರಿಯಬೇಕು. ಸಂಘದಿಂದ ಹೆಚ್ಚಿನ ಪ್ರಚಾರ ನೀಡಿ ಎಲ್ಲರನ್ನೂ ಈ ವ್ಯವಸ್ಥೆ ಒಳಗೆ ತರಲು ಸಹಕರಿಸಬೇಕು ಎಂದರು.
ಪಾಲಿಕೆ ಹಾಗೂ ಉದ್ದಿಮೆದಾರರ ನಡುವೆ ಪರಸ್ಪರ ಸಹಕಾರ ಅಗತ್ಯ. ಆದಾಯದ ದೃಷ್ಟಿಯಲ್ಲಿ ಪಾಲಿಕೆಗೂ ಉದ್ದಿಮೆದಾರರ ಅಗತ್ಯತೆ ಇರುತ್ತದೆ. ಕಳೆದ ಬಾರಿ ಕೊರೊನಾ ಬಂದಾಗ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಂತೆ ಈ ಬಾರಿಯೂ ಮುಂದಾಗಬೇಕು ಎಂದರು.
ಹೋಟೆಲ್ ಉದ್ದಿಮೆದಾರರ ಸಂಘದ ಗೌರವಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಎಲ್ಲಾ ಹೋಟೆಲ್ಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಲಾಗುತ್ತಿದೆ.ಇಲ್ಲಿಯವರೆಗೆ ಯಾವ ಹೋಟೆಲ್ ಗಳಿಂದಲೂ ಕೊರೊನಾ ಹರಡಿಲ್ಲ ಎಂದರು.
ಹೊಸ ಪರವಾನಗಿ ಹಾಗೂ ನವೀಕರಣಕ್ಕೆ ಉದ್ದಿಮೆದಾರರು ಪ್ರತ್ಯೇಕವಾಗಿ ಪಾಲಿಕೆಗೆ ತೆರಳುವ ಬದಲು ಒಂದೇ ಸೂರಿನಡಿ ಸೌಲಭ್ಯ ಸಿಗಲಿ ಎಂಬ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಹೋಟೆಲ್ ಉದ್ದಿಮೆಗೆ ಮಹಾನಗರ ಪಾಲಿಕೆ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡುತ್ತಾ, ತಡವಾಗಿಯಾದರೂ ಇಂತಹ ಮೇಳವೊಂದು ನಡೆಯುತ್ತಿರುವುದು ಸಂತಸದ ವಿಚಾರ. ದೊಡ್ಡ ಉದ್ದಿಮೆದಾರರು ಚಿಕ್ಕ ಉದ್ದಿಮೆದಾರರನ್ನು ಕರೆ ತಂದು ಪರವಾನಗಿ ನವೀಕರಿಸಲು ಹೇಳಬೇಕು ಎಂದರು. ಕೊರೊನಾ ವೇಳೆ ಹೆಚ್ಚಿನದಾಗಿ ಸಹಕರಿಸಿದ್ದಕ್ಕೆ ಧನ್ಯವಾದ ಅರ್ಪಿಸುತ್ತಾ, ಎರಡನೇ ಅಲೆಯ ಹಿನ್ನೆಲೆಯಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸುವಂತೆ ಹೋಟೆಲ್ ಮಾಲೀಕರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮೋತಿ ಆರ್.ಪರಮೇಶ್ವರ್ ಮಾತನಾಡಿ, ಪ್ರತಿ ವರ್ಷ ಪರವಾನಗಿ ನವೀಕರಣ ಕಷ್ಟವಾಗಿದ್ದು, ಐದು ವರ್ಷಕ್ಕೊಮ್ಮೆ ನವೀಕರಿಸುವ ವ್ಯವಸ್ಥೆ ಮಾಡಬೇಕು. ಹೋಟೆಲ್ ಉದ್ದಿಮೆದಾರರಿಗೆ ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ಎಲ್.ಡಿ. ಗೋಣೆಪ್ಪ, ಆರೋಗ್ಯಾಧಿಕಾರಿ ಡಾ.ಸಂತೋಷ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಬಿ.ಕೆ. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.