ಸ್ವಯಂ ಕ್ವಾರಂಟೈನ್ ಹೋಗಿ ಸಾಮಾಜಿಕ ಬಹಿಷ್ಕಾರವಾದಾಗ

Home ಲೇಖನಗಳು ಸ್ವಯಂ ಕ್ವಾರಂಟೈನ್ ಹೋಗಿ ಸಾಮಾಜಿಕ ಬಹಿಷ್ಕಾರವಾದಾಗ

ಸ್ವಯಂ ಕ್ವಾರಂಟೈನ್ ಹೋಗಿ ಸಾಮಾಜಿಕ ಬಹಿಷ್ಕಾರವಾದಾಗ

ಬೆಚ್ಚನೆಯ ಗೂಡು, ಇಚ್ಛೆ ಅರಿವ ಸತಿ ಹಾಗೂ ವೆಚ್ಚಕ್ಕಿಷ್ಟು ಹೊನ್ನಿರಲು ಸ್ವರ್ಗಕ್ಕೇ ಕಿಚ್ಚು ಎಂದು ಸರ್ವಜ್ಞ ಹೇಳಿದ್ದಾನೆ. ನನ್ನದು ಸ್ವಲ್ಪ ಭಿನ್ನ, ಬೆಚ್ಚನೆಯ ಗೂಡು, ಇಚ್ಛೆ ಅರಿವ ಪತಿ, ವೆಚ್ಚಕ್ಕಿಷ್ಟು ಹೊನ್ನಿನ ಜೊತೆಗೆ ಮೆಚ್ಚುಗೆಯ ವೈದ್ಯಕೀಯ ಅಧ್ಯಯನ ನಡೆಸುತ್ತಿರುವ ಮಗ. ಹೀಗಾಗಿ ಸ್ವರ್ಗ ಸ್ವಲ್ಪ ಹತ್ತಿರದಲ್ಲೇ ಇದೆ ಎಂಬ ಭಾವನೆ ಇತ್ತು. ಆದರೆ, ಕೊರೊನಾ ಎಂಬ ರೋಗ, ಸ್ವರ್ಗವನ್ನೇ ಉಲ್ಟಾ ಪಲ್ಟಾ ಮಾಡುತ್ತದೆ ಎಂಬ ಭಾವನೆ ಎಂದೂ ಬಂದಿರಲಿಲ್ಲ.

ಕೊರೊನಾ ಬರುವುದಿರಲಿ, ಕೊರೊನಾದ ಅನುಮಾನವೇ ನನ್ನ ಇಡೀ ಸಂಸಾರವನ್ನು ಅಲ್ಲೋಲ ಕಲ್ಲೋಲ ಮಾಡಿತು. ವಿದೇಶದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದ ನನ್ನ ಮಗ ಕಳೆದ ತಿಂಗಳು ಫೋನ್ ಮಾಡಿ, ಕೊರೊನಾ ಕಾರಣದಿಂದಾಗಿ ಕ್ಲಾಸುಗಳನ್ನು ಮುಚ್ಚಲಾಗಿದೆ. ನಾನಿರುವಲ್ಲಿ ಕೊರೊನಾ ಇಲ್ಲ, ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲೇನೂ ಕೆಲಸವಿಲ್ಲ ವಾಪಸ್ ಬರುತ್ತೇನೆ ಎಂದ.

ನಮ್ಮಲ್ಲೂ ಆಗ ಕೊರೊನಾ ಇರಲಿಲ್ಲ. ಹೀಗಾಗಿ ಇಲ್ಲಿರುವುದೇ ಲೇಸೆಂದು ಬರಲು ತಿಳಿಸಿದೆ. ಮಗ ಸ್ವತಃ ವೈದ್ಯಕೀಯ ವಿದ್ಯಾರ್ಥಿಯಾದ ಕಾರಣ, ತನ್ನ ಜೊತೆ ಓದುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಗಳ ಜೊತೆ ಎಲ್ಲ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡೇ ವಾಪಸ್ ಬಂದ. ಅತಿ ಕಾಳಜಿಯಿಂದ ತನಗಾಗಿ ಪ್ರತ್ಯೇಕ ಕೋಣೆ ಮಾಡಿಕೊಂಡ. ಒಂದೇ ಮನೆಯಲ್ಲಿದ್ದರೂ ಭೇಟಿ ಮಾಡುವುದು ಬೇಡ ಎಂದ. ಅವನಿಚ್ಛೆಯಂತೆ ಆಗಲಿ ಎಂದು ನಾವೂ ಸಹಕರಿಸಿದೆವು.

ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಎಂಬ ನಿಯಮ ಆಗಿನ್ನೂ ಜಾರಿಗೆ ಬಂದಿರಲಿಲ್ಲ. ಆದರೂ, ಮುನ್ನೆಚ್ಚರಿಕೆಯೇ ಮುಖ್ಯ ಎಂದು ಮಗ ವೈದ್ಯಕೀಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸ್ವಯಂ ಕ್ವಾರಂಟೈನ್‌ನಲ್ಲಿರುತ್ತೇನೆ ಎಂದು ಹೇಳಿದ. ಅಲ್ಲಿಂದ ಶುರುವಾಯಿತು ಕೊರೊನಾದ ಕ್ರೂರ ದೆಸೆ. ಮರು ದಿನವೇ ಪೊಲೀಸರು, ವೈದ್ಯಕೀಯ ಸಿಬ್ಬಂದಿಯ ತಂಡ ಭರ್ಜರಿ ಸದ್ದು ಗದ್ದಲದೊಂದಿಗೆ ನಮ್ಮ ಮನೆಗೆ ಬಂದಿತು. ನೆರೆ ಹೊರೆಯವರಿಗೆಲ್ಲಾ ಇಲ್ಲೇನೋ ಆಗಿದೆ ಎಂಬ ಗಾಬರಿಯ ಕುತೂಹಲ. ನಂತರ ಕ್ವಾರಂಟೈನ್ ಬಗ್ಗೆ ಅವರಿಗೆ ಗೊತ್ತಾಯಿತು. ನಂತರ ನಮ್ಮ ಕುಟುಂಬದವರನ್ನೆಲ್ಲ ಅವರು ನೋಡುವ ದೃಷ್ಟಿ ಸಂಪೂರ್ಣ ಬದಲಾಯಿತು.

ನನ್ನ ಕುಟುಂಬದವರು ಮನೆಯಿಂದ ಹೊರ ಬಂದ ತಕ್ಷಣ ಅಕ್ಕ ಪಕ್ಕದ ಮನೆಯವರು ದಢಾರ್ ಎಂದು ಕಿಟಕಿ ಬಾಗಿಲು ಹಾಕಿಕೊಳ್ಳುತ್ತಿದ್ದರು. ಬೆಳಿಗ್ಗೆ ವಾಕಿಂಗ್ ಹೋದರೆ ನಾವು ಸಾಗುವ ದಾರಿಯನ್ನೇ ಬಿಟ್ಟು ಬೇರೆ ದಾರಿಗೆ ಹೋಗುತ್ತಿದ್ದರು. ನಾನು ಸಂಕೋಚ ಬಿಟ್ಟು, ಕೊರೊನಾ ಇದೆ ಎಂಬ ಅನುಮಾನ ನಿಮಗಿದೆಯೇ? ಎಂದು ಕೇಳಿದೆ. ಆದರೂ ಅವರಿಂದ ಸರಿಯಾದ ಉತ್ತರವಿಲ್ಲ. ಸ್ವಯಂ ಕ್ವಾರಂಟೈನ್‌ಗೂ, ಕೊರೊನಾ ಸೋಂಕಿಗೂ ಇರುವ ವ್ಯತ್ಯಾಸ ಅವರಿಗೆ ಗೊತ್ತಿಲ್ಲ ಎಂದೇನೂ ಅಲ್ಲ. ನಮ್ಮ ಏರಿಯಾದಲ್ಲಿರುವವರೆಲ್ಲಾ ಬುದ್ಧಿವಂತರು, ಓದಿದವರು. ಸಾಕಷ್ಟು ವೈದ್ಯರೂ ಇದ್ದಾರೆ. ಆದರೂ ಅವರ ವರ್ತನೆ ಮಿತಿ ಮೀರಿತ್ತು.

ಇಷ್ಟರ ನಡುವೆಯೇ ಸರ್ಕಾರ ಕೈಗೆ ಸೀಲ್ ಹಾಕುವ ಹಾಗೂ ಮನೆ ಬಾಗಿಲಿಗೆ ಕ್ವಾರಂಟೈನ್ ಚೀಟಿ ಅಂಟಿಸುವ ಕ್ರಮ ತೆಗೆದುಕೊಂಡಿತು. ನಂತರವಂತೂ ನಾವು ಸಾಮಾಜಿಕ ಬಹಿಷ್ಕೃತರೇ ಆದೆವು. ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು ಆತ್ಮೀಯರೂ ಮುಖ ನೋಡುವುದನ್ನೇ ಬಿಟ್ಟರು. ಒಂದೆರಡು ಸಮಾಧಾನದ ಮಾತುಗಳನ್ನು ಆಡಿಸಬೇಕು ಎಂಬ ಕಾಳಜಿಯೂ ಮರೆಯಾಯಿತು. ಈ ನಡುವೆಯೇ ಒಬ್ಬ ಮಹಾಶಯ ನನ್ನ ಮಗನಿಗೆ ಕೊರೊನಾ ಸೋಂಕಿರುವುದು ಖಚಿತವಾಗಿದೆ ಎಂಬ ಗಾಳಿ ಸುದ್ದಿಯನ್ನೂ ಹರಡಿದೆ. ಅಲ್ಲಿಗೆ ನಮ್ಮ ನೆಮ್ಮದಿ ಸಂಪೂರ್ಣ ಮಣ್ಣು ಪಾಲಾಯಿತು.

ಈ ಗಾಳಿ ಸುದ್ದಿ ನಿಜವೇನ್ರಿ ಎಂಬ ಒಂದು ಫೋನ್ ಮಾಡಿದರೂ ಸತ್ಯ ಹೇಳುತ್ತಿದ್ದೆವು. ಆದರೆ, ಸತ್ಯ ಯಾರಿಗೆ ಬೇಕು? ನಾವು ಇಲ್ಲಿರುವುದೇ ಅಪರಾಧ ಎಂಬ ರೀತಿಯ ವರ್ತನೆ ನೆರೆಹೊರೆಯವರಿಂದ. ಇಷ್ಟರ ನಡುವೆಯೂ ಒಳ್ಳೆಯವರು ಇಲ್ಲವೆಂದಲ್ಲ. ಮನೆಗೆ ಹಾಲು ಹಾಕುವ ಮಹಿಳೆಯೊಬ್ಬರು ಸಾಂತ್ವನ ಹೇಳುತ್ತಿದ್ದರು. ಸ್ನೇಹಿತೆಯೊಬ್ಬರು ಧೈರ್ಯ ತುಂಬಿದರು. ನಾನು ಅರಾಮಾಗಿರುವಾಗ ಕಂಡವರ ವರ್ತನೆಗೆ ಏಕೆ ಬೆಲೆ ಕೊಡುತ್ತೀಯ? ಎಂದು ಮಗ ಹೇಳಿದ್ದರಿಂದ ಸ್ವಲ್ಪ ಸ್ಥೈರ್ಯ ಬಂತು. ಇಲ್ಲದಿದ್ದರೆ ಮಾನಸಿಕ ಖಿನ್ನತೆಗೆ ಹೋಗುವ ದಾರಿ ದೂರವೇನೂ ಇರಲಿಲ್ಲ.

ಹಾಗೂ ಹೀಗೂ ಕ್ವಾರಂಟೈನ್ ಅವಧಿ ಪೂರ್ಣವಾಯಿತು. ಮಗ, ಪತಿ ಹಾಗೂ ನಾನು ಆರೋಗ್ಯವಾಗಿದ್ದೇವೆ. ಆದರೆ, ನಮ್ಮ ಹಿತೈಷಿಗಳು ಎಂದು ಭಾವಿಸಿದ್ದವರ ವರ್ತನೆಯಿಂದ ಆದ ನೋವು ಸುಲಭವಾಗಿ ಮರೆಯಲಾಗುತ್ತಿಲ್ಲ. ಕೊರೊನಾ ನಮ್ಮ ಸುತ್ತಲಿನವರ ಮುಖವಾಡ ಕಳಚಿ ನಿಜ ದರ್ಶನ ಮಾಡಿಸಿತು. ಇದಕ್ಕಾಗಿ ಅದಕ್ಕೆ ಧನ್ಯವಾದ ಹೇಳಬೇಕೋ ಅಥವಾ ಮನುಷ್ಯತ್ವ ಎಂದರೆ ಇಷ್ಟೇ ಎಂದು ಹೀಗಳೆಯಬೇಕೋ ಗೊತ್ತಿಲ್ಲ.

ಒಂದಂತೂ ಹೇಳಲು ಬಯಸುತ್ತೇನೆ. ನೀವು ನಮ್ಮನ್ನು ದೂರ ಇಟ್ಟಿರಬಹುದು. ಆದರೆ, ಯಾವುದಾದರೂ ಒಂದು ದಿನ ಅನಾರೋಗ್ಯ ಎದುರಾದರೆ ನನ್ನ ಮಗನಂತಹ ವೈದ್ಯರ ಬಳಿಯೇ ಬರಬೇಕು. ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿಯೇ ಈಗ ದೇಶ ಕಾಯುತ್ತಿರುವ ಯೋಧರು, ರಕ್ಷಣೆ ಮಾಡುತ್ತಿರುವ ದೇವರು. ಅಂಥವರ ಕುಟುಂಬದ ಬಗ್ಗೆಯೇ ನೀವು ತೋರಿರುವ ವರ್ತನೆ ಸರಿಯೇ? ಒಮ್ಮೆ ಯೋಚಿಸಿ ನೋಡಿ.

– ಓರ್ವ ನೊಂದ ಗೃಹಿಣಿ

error: Content is protected !!