ಮಲೇಬೆನ್ನೂರು, ಏ.20- ಕೊಕ್ಕನೂರು ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಸಿಪಿಐ ಸತೀಶ್, ಪಿಎಸ್‌ಐ ವೀರಬಸಪ್ಪ ಅವರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯವರ ಜೊತೆ ಸಭೆ ನಡೆಸಿ, ರಾಮನವಮಿಯ ಅಂಗವಾಗಿ ಪ್ರತಿವರ್ಷ ಜರುಗುತ್ತಿದ್ದ ರಥೋತ್ಸವವನ್ನು ನಡೆಸದಂತೆ ಮನವಿ ಮಾಡಿದರು.
ಕೊರೊನಾ ಅಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ರಥೋತ್ಸವ ನಡೆಸಿದರೆ ಹೊರಗಡೆಯಿಂದ ಭಕ್ತರು ಬಂದು ಹೋಗುವುದರಿಂದ ನಿಮ್ಮ ಗ್ರಾಮಕ್ಕೆ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ ಎಂದು ಸಿಪಿಐ ಸತೀಶ್ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ದೇವಸ್ಥಾನ ಸಮಿತಿಯವರು ಮಾತ್ರ ಹಾಜರಿದ್ದು, ಪೂಜಾ ವಿಧಿ-ವಿಧಾನಗಳನ್ನು ಮಾಡಿಕೊಳ್ಳಿ, ಜನಜಾತ್ರೆ ಆಗುವ ಯಾವುದೇ ಆಚರಣೆ ಬೇಡ ಎಂದಾಗ ಗ್ರಾಮಸ್ಥರು ಒಪ್ಪಿಕೊಂಡು, ರಥೋತ್ಸವ ನಡೆಸದಂತೆ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಕಳೆದ ವರ್ಷವೂ ಲಾಕ್‌ಡೌನ್ ಕಾರಣದಿಂದಾಗಿ ಗ್ರಾಮದಲ್ಲಿ ರಥೋತ್ಸವ ನಡೆದಿರಲಿಲ್ಲ, ಈ ವರ್ಷವೂ ರಥೋತ್ಸವ ರದ್ದು ಮಾಡಿರುವುದು ಗ್ರಾಮಸ್ಥರಲ್ಲಿ ಬೇಸರ ತಂದಿದೆ. ಆದರೂ ಎಲ್ಲರ ಆರೋಗ್ಯ ದೃಷ್ಟಿಯಿಂದ ಅನಿವಾರ್ಯ ಎಂದಿದ್ದಾರೆ.
ರದ್ದು : ಹರಳಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ, ಹೊಳೆ ಸಿರಿಗೆರೆ, ಕೆ.ಎನ್. ಹಳ್ಳಿಯ ಉಚ್ಛಾಯಗಳನ್ನು ರದ್ದು ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪಿಎಸ್‌ಐ ವೀರಬಸಪ್ಪ ತಿಳಿಸಿದ್ದಾರೆ.
ಸರ್ಕಾರದ ಸೂಚನೆಗಳನ್ನು ಮೀರಿ ರಥೋತ್ಸವ, ಉತ್ಸವಗಳನ್ನು ನಡೆಸಿದರೆ ಅಂಥವರ ಮೇಲೆ ಕೇಸು ದಾಖಲಿಸುವುದಾಗಿ ವೀರಬಸಪ್ಪ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.