ದಾವಣಗೆರೆ, ಫೆ.17- ಜಿಲ್ಲೆ ಸಮಾಚಾರ ದಿನಪತ್ರಿಕಾ ಬಳಗದ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಕೊಡಮಾಡುವ `ವರ್ಷದ ವ್ಯಕ್ತಿ-2020′ ಪ್ರಶಸ್ತಿಗೆ ಈ ಬಾರಿ ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ದಿನಾಂಕ 20 ರಂದು ಸಂಜೆ 6 ಗಂಟೆಗೆ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮ ಏರ್ಪಾಡಾಗಿದೆ ಎಂದು ಬಳಗದ ಸಂಚಾಲಕ ಸಾಲಿಗ್ರಾಮ ಗಣೇಶ್ ಶೆಣೈ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೈಕೋರ್ಟ್ ವಿಶ್ರಾಂತ ನ್ಯಾಯ ಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ದಾವಣಗೆರೆ ವಿವಿ ಕುಲಪತಿ ಡಾ. ಶರಣಪ್ಪ ವಿ ಹಲಸೆ ಅಧ್ಯಕ್ಷತೆ ವಹಿ ಸುವರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ ಭಾಗವಹಿಸಲಿದ್ದಾರೆ.
ಹಿರಿಯ ರಂಗಕರ್ಮಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಐರಣಿ ಅವರನ್ನು ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಬಳಗದ ಸಂಸ್ಥಾಪಕ ವಿ. ಹನುಮಂತಪ್ಪ, ಅಧ್ಯಕ್ಷ ಡಾ. ಈಶ್ವರ ಶರ್ಮ ಮತ್ತಿತರರು ಉಪಸ್ಥಿತರಿರುವರು.
ಇದೇ ವೇಳೆ ವಿಜಯಲಕ್ಷ್ಮಿ ಸ್ನೇಹ ಬಳಗ, ಗಾನಗಂಧರ್ವ ಕಲಾ ತಂಡ, ಕಲಾಕುಂಚ ಎಸ್.ಎಸ್. ಬಡಾವಣೆ ಶಾಖೆ ಕಲಾವಿದರಿಂದ ಸಮೂಹ ಗೀತೆ ಗಾಯನ, ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಶೆಣೈ ವಿವರಿಸಿದರು.
ಬಹುಮಾನ ವಿತರಣೆ : ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಲಿಖಿತ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
`ನ್ಯಾಯಾಲಯದಲ್ಲಿ ಕನ್ನಡ’ ವಿಷಯ ಕುರಿತು ಪ್ರಬಂಧ ಸ್ಪರ್ಧೆ ವಿಜೇತರು :
ಎಂ.ಎನ್. ಸುಂದರರಾಜ್ – ಶಿವಮೊಗ್ಗ (ಪ್ರಥಮ), ಶೀಲಾ ಆಚಾರ್ – ಸಾಗರ (ದ್ವಿತಿಯ), ಹೆಚ್.ವೈ. ಚಂದ್ರಶೇಖರ್ – ಕತ್ತಿಗೆ (ದಾವಣಗೆರೆ ಜಿಲ್ಲೆ), ಎಸ್.ಎಸ್. ವಾಗೀಶ್ – ಶಿವಮೊಗ್ಗ, ಮಮತಾ ರಾಧಾಕೃಷ್ಣ – ದಾವಣಗೆರೆ, ಡಾ. ಫ್ರಾನ್ಸಿಸ್ ಕ್ಸೇವಿಯರ್ – ಹರಿಹರ (ಸಮಾಧಾನಕರ ಬಹುಮಾನ)
ಪತ್ರಿಕಾಗೋಷ್ಠಿಯಲ್ಲಿ ಬಳಗದ ಗೌರವಾಧ್ಯಕ್ಷ ಎನ್.ಟಿ. ಯರಿಸ್ವಾಮಿ, ಸದಸ್ಯರಾದ ಎನ್.ಕೆ. ಕೊಟ್ರೇಶ್, ಶ್ರೀಮತಿ ಭಾರತಿ ಉಪಸ್ಥಿತರಿದ್ದರು.