ಕೆನರಾ ಬ್ಯಾಂಕ್ ನೌಕರರಿಂದ ಮಾಸ್ಕ್ ವಿತರಣೆ

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ 76ನೇ ಸ್ಥಾಪನಾ ದಿನಾಚರಣೆ

ದಾವಣಗೆರೆ, ಏ.20- ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಬ್ಯಾಂಕ್ ಗ್ರಾಹಕರು, ಪುಟ್‍ಪಾತ್ ವ್ಯಾಪಾರಸ್ಥರಿಗೆ ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ ಮಾಡುವ ಮೂಲಕ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ 76ನೇ ಸ್ಥಾಪನಾ ದಿನವನ್ನು ನಗರದ ಲ್ಲಿಂದು ಆಚರಿಸಲಾಯಿತು. 

ಕೆನರಾ ಬ್ಯಾಂಕ್‍ನ ಮಂಡಿಪೇಟೆ, ವಿದ್ಯಾನಗರ ಶಾಖೆಯಲ್ಲಿ ಬ್ಯಾಂಕ್ ಗ್ರಾಹಕರಿಗೆ ಹಾಗೂ ಪುಟ್‍ಪಾತ್ ವ್ಯಾಪಾರಿಗಳಿಗೆ ಮಾಸ್ಕ್ ಹಾಗೂ ಸಾನಿಟೈಸರ್ ನೀಡುವ ಮೂಲಕ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದ ತಿಳಿವಳಿಕೆ ಮೂಡಿಸಲಾಯಿತು.

ಯೂನಿಯನ್‍ನ ರಾಜ್ಯ ಉಪಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಬ್ಯಾಂಕ್ ಉದ್ಯೋಗಿಗಳ ಪ್ರಪ್ರಥಮ ಸಂಘಟನೆಯಾಗಿ ಸ್ಥಾಪನೆಗೊಂಡಿತು. 

ಸ್ಥಾಪನೆಯಾದ ದಿನದಿಂದಲೂ ಬ್ಯಾಂಕ್ ಉದ್ಯೋಗಿಗಳ ಪರವಾಗಿ ಹೋರಾಟ ಮಾಡಿ ಬ್ಯಾಂಕ್ ನೌಕರರಿಗೆ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದರು. 

ಬ್ಯಾಂಕಿಂಗ್ ಸೌಲಭ್ಯವು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕಾಗಬೇಕು. ಸಾರ್ವಜನಿಕ ವಲಯದ ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕೇ ವಿನಃ ಖಾಸಗಿ ಬಂಡವಾಳಶಾಹಿಗಳ ಲೂಟಿಗಾಗಿ ಅಲ್ಲ  ಎನ್ನುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸ್ಪಷ್ಟವಾದ ನಿಲುವಾಗಿದೆ. ಇದಕ್ಕಾಗಿ ಸತತವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. 

ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ, ಕೆನರಾ ಬ್ಯಾಂಕ್ ವಿದ್ಯಾನಗರ ಶಾಖೆಯ ಮುಖ್ಯ ಪ್ರಬಂಧಕ ಆರ್.ಬಿ.ಸಂಜೀವಪ್ಪ, ಕೆನರಾ ಬ್ಯಾಂಕ್ ವರ್ಕ್ ಮೆನ್ ಎಂಪ್ಲಾಯೀಸ್ ಯೂನಿಯನ್‍ನ ಕೇಂದ್ರ ಸಮಿತಿ ಸದಸ್ಯ ಆರ್.ಆಂಜನೇಯ, ಕೆ.ವಿಶ್ವನಾಥ ಬಿಲ್ಲವ, ಸಿ.ಪರಶುರಾಮ ಹಾಗೂ ಕಾಡಜ್ಜಿ ಎನ್.ವೀರಪ್ಪ, ಕೆ.ಶಶಿಶೇಖರ್, ದಾದಾಪೀರ್. ಸಿದ್ದಲಿಂಗೇಶ್ ಕೋರಿ, ಕೆ. ಸುನಂದಮ್ಮ, ಡಿ.ಎಮ್. ಆನಂದಕುಮಾರ್, ಎಮ್. ಸಂದೀಪ್, ಡಿ.ಎ. ಸಾಕಮ್ಮ, ಬಿ.ಎನ್. ಶ್ವೇತಾ, ಆಶಾ ವಿದ್ಯಾಸಾಗರ್, ದರ್ಶನ್, ಡಿ.ಎ. ರವಿ, ಅಂಬರೀಶ್ ಸೇರಿದಂತೆ ಇತರರು ಇದ್ದರು.

error: Content is protected !!