ಪಾಠ, ಪಠ್ಯೇತರಕ್ಕಿಂತ ಊಟಕ್ಕೆ ಮಹತ್ವಕೊಡುತ್ತಿರುವ ಸರ್ಕಾರ

ಶ್ರೀ ಅನ್ನದಾನೀಶ್ವರ ಮಠದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರೊ. ಮುದ್ದಣ್ಣ ನಾಗರಾಳ ವ್ಯಾಕುಲತೆ

ದಾವಣಗೆರೆ, ಅ. 4 – ಪಾಠಕ್ಕಿಂತ ಸರ್ಕಾರಗಳು ಶಾಲೆಯಲ್ಲಿ ಅನ್ನಕ್ಕೆ ಪ್ರಾಧಾನ್ಯತೆ ನೀಡಿದ್ದರಿಂದ ಶಿಕ್ಷಕರು ಏನು ಕಲಿಸಬೇಕೋ ಅದನ್ನು ಕಲಿಸಲು ಸಾಧ್ಯವಾಗುತ್ತಿಲ್ಲವೆಂದು ಸರ್ಕಾರಿ ಮೋತಿವೀರಪ್ಪ ಕಾಲೇಜಿನ ಉಪನ್ಯಾಸಕ ಮುದ್ದಣ್ಣ ನಾಗರಾಳ್‍ ಶಿಕ್ಷಕರ ಗೋಳನ್ನು ವ್ಯಕ್ತಪಡಿಸಿದರು.

ಇಲ್ಲಿನ ಹಾಲಕೆರೆ ಶ್ರೀ ಅನ್ನದಾನೀಶ್ವರ ಶಾಖಾ ಮಠದಲ್ಲಿ ಏರ್ಪಡಿಸಿದ್ದ 245ನೇ ಶಿವಾನುಭವ ಸಂಪದ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಶಿಕ್ಷಕರು ಮಕ್ಕಳಿಗೆ ಪಾಠ ಪ್ರವಚನವನ್ನು ನೋಡಿಕೊಂಡು, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ರಜೆಯ ದಿನಗಳಲ್ಲಿ ಮನೆ ಮನೆ ಸರ್ವೆ  ಹೀಗೆ ಹತ್ತಾರು ಸಮಸ್ಯೆಗಳಿಂದಾಗಿ ಶಿಕ್ಷಕರಿಗೆ ಇರುವ ಸ್ಥಾನ-ಮಾನ ಗೌರವವೂ ಸಿಗದಂತಾಗಿದೆ ಎಂದರು.

ಸ್ವಾತಂತ್ರ್ಯಪೂರ್ವದಲ್ಲಿ ಬಸವ ಪರಂಪರೆಯ ಮಠಗಳು ಅಕ್ಷರ, ಅನ್ನ, ಅರಿವೆ ನೀಡಿದ್ದರಿಂದ ಇಂದು ಶಿಕ್ಷಣ ಸುಧಾರಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರತಿಭೆಗಳು ಹೊರಬರುತ್ತಿವೆ. ನಗರ ಪಟ್ಟಣಗಳಲ್ಲಿ ಪೋಷಕರ ಹಣದ ಮದದಲ್ಲಿ ವಿದ್ಯಾರ್ಥಿಗಳೂ ಸಹ ಶಿಕ್ಷಕರನ್ನು ಏಕವಚನದಲ್ಲಿ ಮಾತನಾಡಿ ಸುವಂತಹ ಸಂದರ್ಭಗಳು ಬಂದಿವೆ ಎಂದರು.

ಸ್ವಾತಂತ್ರ್ಯಪೂರ್ವದ ಶಿಕ್ಷಣ, ಗುರು ನಂತರದ ಪರಿಸ್ಥಿತಿಗೆ ಬಹಳಷ್ಟು ವ್ಯತ್ಯಾಸವಾಗಿದೆ. ಶಿಕ್ಷಣ ಎನ್ನುವುದು ಉಳ್ಳವರ ವ್ಯಾಪಾರವಾಗಿದೆ. ಪೋಷಕರು ಸಹ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದರಿಂದ ರಾಜ್ಯದಲ್ಲಿ ಸುಮಾರು 7 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಸಮಸ್ಯೆಗಳ ಸರಮಾಲೆಗಳನ್ನು ಬಿಚ್ಚಿಟ್ಟ ನಾಗರಾಳ್‍ ಅವರು, ಸಮಸ್ಯೆಗಳ ಸುಳಿಯಲ್ಲಿರುವ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರಗಳು ಶಿಕ್ಷಕರನ್ನು ತಮ್ಮ ಯೋಜನೆಗೆ ಬಳಸಿಕೊಳ್ಳದೆ ಪಾಠ, ಪ್ರವಚನ, ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡುವಂತಹ ಗುರಿಯನ್ನು ನಿರ್ಧರಿಸಬೇಕೆಂದರು.

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದೊಡ್ಡಬಾತಿ ಕೆರೆಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್. ನಾಗರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳ ಮನವೊಲಿಸಿ ಓದಿಸುವಂತಹ ಮನೋಭಾವದ ಕೊರತೆ ಶಿಕ್ಷಕರಲ್ಲಿ ಎದ್ದು ಕಾಣುತ್ತಿದೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ  ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಶಿಕ್ಷೆ ಸಹಿತ ಶಿಕ್ಷಣ ಜಾರಿಯಾಗಬೇಕು, ಅಂದಾಗ ವಿದ್ಯಾರ್ಥಿಗಳಲ್ಲಿನ ಪ್ರತಿಭೆ  ಹೊರ ಬರುತ್ತದೆ. ಇಲ್ಲದಿದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಗುರಿಮುಟ್ಟಲು ಸಾಧ್ಯವಿಲ್ಲ. ಸರ್ಕಾರಗಳು ಈ ಬಗ್ಗೆ ಚಿಂತನೆ ನಡೆಸಬೇಕೆಂದರು. ವಿದ್ಯಾರ್ಥಿಗಳು ಬೆಟ್ಟದಂತೆ ಬೆಳೆದು ಶಿಕ್ಷಕರ ಎದುರಿಗೆ ವಿನಯದಿಂದ ನಿಂತಾಗ ಆಗುವ ಆನಂದ ಪೋಷಕರಿಗಿಂತಲೂ ಶಿಕ್ಷಕರಿಗೆ ಹೆಚ್ಚಿನ ಸಂತೋಷವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಮಠದ ಜಗದ್ಗುರುಗಳು ಮುದ್ದಣ್ಣ ನಾಗರಾಳ್ ಅವರಿಗೆ `ಶಿಕ್ಷಣ ರತ್ನ’, ಕೆ.ಎಸ್. ನಾಗರಾಜಪ್ಪ ಇವರಿಗೆ  `ವಿದ್ಯಾರತ್ನ’ ಪುರಸ್ಕಾರ ನೀಡಿ ಆಶೀರ್ವದಿಸಿದರು.

ಮುಖ್ಯೋಪಾಧ್ಯಾಯಿನಿಯಾಗಿದ್ದ ಲಿಂ. ಶ್ರೀಮತಿ ಕೆ.ಸಿ. ಗಂಗಮ್ಮ ಅವರ 10ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಹಿರಿಯ ನ್ಯಾಯವಾದಿ ಎಂ.ಆರ್. ಮಹೇಶ್ವರಪ್ಪ ಅವರು ಭಕ್ತಿ ಸೇವೆ ವಹಿಸಿಕೊಂಡಿದ್ದರು.

ಗದಿಗೆಯ್ಯ ಹಿರೇಮಠ ಇವರಿಂದ ಪ್ರಾರ್ಥನೆ, ನಂತರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ ಸ್ವಾಗತಿಸಿದರು. ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.

ಮಠದ ಟ್ರಸ್ಟಿನ ಉಪಾಧ್ಯಕ್ಷ  ಅಮರಯ್ಯ ಗುರುವಿನಮಠ, ಕಾರ್ಯದರ್ಶಿ ಎನ್. ಅಡಿವೆಪ್ಪ, ನಾಗರಾಜ ಯರಗಲ್, ಶಿಕ್ಷಕರಾದ ಮಹಾರುದ್ರಪ್ಪ ಮೆಣಸಿಕಾಯಿ, ಶಂಭುಲಿಂಗಪ್ಪ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!