ಮಲೇಬೆನ್ನೂರು, ಫೆ.17- ಇಲ್ಲಿನ ಪುರಸಭೆ ಅಧ್ಯಕ್ಷರಾದ ಶ್ರೀಮತಿ ನಾಹೀದ ಅಂಜುಂ ಅವರು 15ನೇ ಹಣಕಾಸು ಯೋಜನೆಯಡಿ ಮಂಜೂರಾತಿ ಪಡೆದುಕೊಂಡಿರುವ ಕಾಮಗಾರಿಗಳನ್ನು ಮ್ಯಾನುಯಲ್ ಟೆಂಡರ್ ಕರೆಯುವಂತೆ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರಿಗೆ ನಾನು ಹಾಗೂ ಸದಸ್ಯರು ಒತ್ತಾಯಿಸಿದ್ದೆವು ಎಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ಪತ್ರದಲ್ಲಿ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಂಗಳವಾರ ಪುರಸಭೆ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರಿಗೆ ನೋಟಿಸ್ ಜಾರಿ ಮಾಡಿ, ನಿಮ್ಮ ಸದಸ್ಯತ್ವವನ್ನು ದುರುಪಯೋಗ ಪಡಿಸಿಕೊಂಡಿರುವ ಕುರಿತು ನಿಮ್ಮ ಸದಸ್ಯತ್ವವನ್ನು ಏಕೆ ರದ್ದುಗೊಳಿಸಬಾರದು ಎಂಬುದಕ್ಕೆ ಸೂಕ್ತ ಸಮಜಾಯಿಷಿ ನೀಡುವಂತೆ ತಿಳಿಸಿದ್ದರು.
ಆ ಪ್ರಕಾರ ಬುಧವಾರ ಪುರಸಭೆ ಅಧ್ಯಕ್ಷರಾದ ಶ್ರೀಮತಿ ನಾಹೀದ ಅಂಜುಂ, ಉಪಾಧ್ಯಕ್ಷರಾದ ಶ್ರೀಮತಿ ಅಂಜಿನಮ್ಮ ಅವರ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು ತಪ್ಪಾಗಿರುವ ಬಗ್ಗೆ ತಿಳಿಸಿದರೆ, ಬಿಜೆಪಿ ಸದಸ್ಯರು ಪ್ರತ್ಯೇಕವಾಗಿ ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ, ದಿನಾಂಕ 15.12.2020 ರಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಇ-ಟೆಂಡರ್ ಮೂಲಕವೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ತೀರ್ಮಾನಿಸಿ ದ್ದೆವು. ಆದರೆ, ಮ್ಯಾನುಯಲ್ ಟೆಂಡರ್ ಪ್ರಕ್ರಿಯೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಹಾಗೂ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಮೇಲೆ ನಾವು ಯಾವುದೇ ರೀತಿಯ ಒತ್ತಡ ಹಾಕಿಲ್ಲ ಮತ್ತು ನಾವು ಯಾವುದೇ ಮನವಿಯಲ್ಲಿ ಒಪ್ಪಿಗೆ ಕೊಟ್ಟಿಲ್ಲ, ಸಹಿಯನ್ನೂ ಮಾಡಿಲ್ಲ ಎಂದು ಪತ್ರ ಮುಖೇನ ತಿಳಿಸಿದ್ದಾರೆ.
ಇದಕ್ಕೆ ಸದಸ್ಯರಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ಮುಂದೆ ಈ ರೀತಿ ತಪ್ಪುಗಳನ್ನು ಮಾಡಬೇಡಿ ಮತ್ತು ಅಧಿಕಾರಿಗಳಿಗೆ ತಪ್ಪು ಮಾಡುವಂತೆ ಒತ್ತಡ ಹಾಕಬಾರದೆಂದು ತಿಳಿ ಹೇಳಿದ್ದಾರೆ ಎಂದು ಗೊತ್ತಾಗಿದೆ.
ಆರೋಪ : ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ. ಸುರೇಶ್ ಅವರು ಪುರಸಭೆ ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಬಳಿ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.
ಸಭೆ : ಇಲ್ಲಿನ ಪುರಸಭೆಯಲ್ಲಿ 2021-22ನೇ ಸಾಲಿನ ಆಯವ್ಯಯವನ್ನು ತಯಾರಿಸುವ ಕುರಿತು ಗುರುವಾರ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕರ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ.