ಲಸಿಕೆ ಹಾಕಿಸಿಕೊಳ್ಳದವರಿಗೆ ಸರ್ಕಾರಿ ಸೌಲಭ್ಯ ಕಡಿತ

ಲಸಿಕೆ ಹಾಕಿಸಿಕೊಳ್ಳದವರಿಗೆ ಸರ್ಕಾರಿ ಸೌಲಭ್ಯ ಕಡಿತ - Janathavani

ಡಿಸಿ ಖಡಕ್ ಎಚ್ಚರಿಕೆ

ದಾವಣಗೆರೆ ಫೆ. 17 – ಕೋವಿಡ್ ಲಸಿಕೆಯನ್ನು ಇದು ವರೆಗೂ ಹಾಕಿಸಿಕೊಳ್ಳದ ಆರೋಗ್ಯ ಕ್ಷೇತ್ರ ಹಾಗೂ ಮುಂಚೂಣಿ ಕ್ಷೇತ್ರ ದ ಫಲಾನುಭವಿಗಳು ಕೂಡಲೇ ಸಂಬಂಧಪಟ್ಟ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು, ತಪ್ಪಿದಲ್ಲಿ ಅಂತಹವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಲಸಿಕೆ ಕಾರ್ಯಕ್ರಮದ ಪ್ರಗತಿ ಕುರಿತಂತೆ ಬುಧವಾರದಂದು ಆರೋಗ್ಯ ಇಲಾಖೆಯ ಆಯುಕ್ತರು ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು. 

ಕೋವಿಡ್ ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿದ ಆರೋಗ್ಯ ಇಲಾಖೆ ಆಯುಕ್ತ ಡಾ. ತ್ರಿಲೋಕಚಂದ್ರ ಅವರು, ಜಿಲ್ಲೆಯ ಪ್ರಗತಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದವರಿಗೆ ನೀಡಲಾದ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 18920 ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಬದಲಿಗೆ ಈವರೆಗೆ 9979 ಜನರು ಲಸಿಕೆ ಹಾಕಿಸಿಕೊಂಡಿದ್ದು, ಶೇ. 52.7 ಸಾಧನೆಯಾಗಿದೆ. ಎರಡನೆ ಹಂತದಲ್ಲಿ ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಅವರಿಗೆ ಕೋವಿಡ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿತ್ತು.  ಪೊಲೀಸ್ ಇಲಾಖೆಯ 2076 ಜನರಿಗೆ ಕೋವಿಡ್ ಲಸಿಕೆ ನೀಡಿಕೆಯ ಗುರಿಯ ಬದಲಿಗೆ ಕೇವಲ 629 ಜನ ಮಾತ್ರ ಪಡೆದಿದ್ದಾರೆ. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 3413 ಜನರ ಪೈಕಿ 408.  ನಗರಾಭಿವೃದ್ಧಿ ಇಲಾಖೆಯ 1644 ಜನರ ಪೈಕಿ 350 ಜನ ಮಾತ್ರ ಪಡೆದಿದ್ದಾರೆ.  ಹೀಗಾಗಿ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧನೆ ತೃಪ್ತಿಕರವಾಗಿಲ್ಲ. ಜಿಲ್ಲೆಯ ಕಳಪೆ ಸಾಧನೆಯನ್ನು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಲಸಿಕೆಗಾಗಿ ಗುರುತಿಸಲಾಗಿರುವ ಮೊದಲ ಹಾಗೂ ಎರಡನೆ ಹಂತದ ಫಲಾನುಭವಿಗಳು, ಇದುವರೆಗೂ ಲಸಿಕೆ ಪಡೆಯದೇ ಇದ್ದಲ್ಲಿ ಕೂಡಲೇ ಸಂಬಂಧಪಟ್ಟ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ಲಸಿಕೆ ಪಡೆಯದೇ ಇರುವ ಫಲಾನುಭವಿಗಳು ಒಂದು ವೇಳೆ ಕೋವಿಡ್ ಸೋಂಕಿಗೆ ಒಳಗಾದಲ್ಲಿ, ಅಂತಹವರು ತಮ್ಮ ಸ್ವಂತ ಖರ್ಚಿನಿಂದಲೇ ಚಿಕಿತ್ಸಾ ವೆಚ್ಚ ಭರಿಸಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ ಎಂಬುದಾಗಿ ಈಗಾಗಲೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.  ಹೀಗಾಗಿ ಇದುವರೆಗೂ ಕೋವಿಡ್ ಲಸಿಕೆ ಪಡೆಯದೇ ಇರುವವರು ಕೂಡಲೇ ತಂಡೋಪತಂಡವಾಗಿ ಆಯಾ ಲಸಿಕಾ ಕೇಂದ್ರಕ್ಕೆ ತೆರಳಿ, ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸೂಚನೆ ನೀಡಿದರು.

ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಮಾಹಿತಿ ನೀಡಿ, ಆರೋಗ್ಯ ಕ್ಷೇತ್ರ ಕಾರ್ಯಕರ್ತರಾದ ಖಾಸಗಿ ಮತ್ತು ನೋಂದಾಯಿತ ಆರೋಗ್ಯ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು.  ಮುಂಚೂಣಿ ಕಾರ್ಯಕರ್ತರಾದ ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಯಾವುದೇ ಎಸ್‍ಎಂಎಸ್‍ಗೆ ಕಾಯದೆ, ಯಾವುದಾದರೂ ಒಂದು ಗುರುತಿನ ಚೀಟಿ ತೆಗೆದುಕೊಂಡು ಹೋಗಿ ಲಸಿಕೆ ಪಡೆಯಬಹುದು.

ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ದಾವಣಗೆರೆ ಹಾಗೂ ಹರಿಹರ, ಜಗಳೂರು, ಹೊನ್ನಾಳಿ, ಚನ್ನಗಿರಿ ತಾಲ್ಲೂಕು ಆಸ್ಪತ್ರೆಗಳನ್ನು ಕೋವಿಡ್-19 ಲಸಿಕಾಕರಣಕ್ಕಾಗಿ ನಿಗದಿಪಡಿಸಲಾಗಿದೆ ಎಂದರು.

ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!