ಪಂಚ ಕೌಶಲ್ಯ ಕಲಿಕೆ, ಕ್ರೀಡಾಂಗಣ ನಿರ್ಮಾಣ

ಪಂಚ ಕೌಶಲ್ಯ ಕಲಿಕೆ, ಕ್ರೀಡಾಂಗಣ ನಿರ್ಮಾಣ - Janathavani200 ಕೋಟಿ ರೂ. ವೆಚ್ಚದ ಆಹಾರ ಅಧ್ಯಯನ ಘಟಕ ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಹಲಸೆಯವರ ವಿಷನ್ – 2025

ದಾವಣಗೆರೆ, ಫೆ. 16 – ಚಿನ್ನಸ್ವಾಮಿ ಕ್ರೀಡಾಂಗಣ ರೀತಿಯ ಸೌಲಭ್ಯವುಳ್ಳ ಕ್ರೀಡಾಂಗಣ ಸ್ಥಾಪನೆ, 200 ಕೋಟಿ ರೂ. ಪೋಷಣೆ ಮತ್ತು ಆಹಾರ ಪದ್ಧತಿ ಅಧ್ಯಯನ ಘಟಕ, ಐದು ರೀತಿಯ ಕೌಶಲ್ಯಗಳ ಕಲಿಕೆ ಸೇರಿದಂತೆ ಹಲವು ಯೋಜನೆಗಳ §ವಿಷನ್ – 2025′ ಗುರಿ ಹೊಂದಿರುವುದಾಗಿ ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಪತ್ರಕರ್ತ ರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಐದು ವಿಷಯಗಳಿಗೆ ದಾವಣಗೆರೆ ವಿಶ್ವವಿದ್ಯಾನಿಲಯ ಒತ್ತು ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಡಿಜಿಟಲ್ ಕಲೆಯಲ್ಲಿ ಡಿಪ್ಲೋಮಾ, ಪೋಷಣೆ ಮತ್ತು ಆಹಾರ ಪದ್ಧತಿ ಅಧ್ಯಯನದ ಪಿಜಿ. ಡಿಪ್ಲೋಮಾ, ಡಿಜಿಟಲ್ ಮಾಧ್ಯಮದ ಪಿ.ಜಿ. ಡಿಪ್ಲೋಮಾ, ಚಿಲ್ಲರೆ ಮಾರುಕಟ್ಟೆ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಬಿ. ವೊಕೇಷನ್ ಹಾಗೂ ಸೈಬರ್ ರಕ್ಷಣೆಯಲ್ಲಿ ಎಂ. ವೊಕೇಷನ್ ಕೋರ್ಸ್‌ಗಳ ವಿಷಯಗಳಿಗೆ ವಿಶ್ವವಿದ್ಯಾನಿ ಲಯ ಆದ್ಯತೆ ನೀಡುತ್ತಿದೆ ಎಂದರು.

ಆಹಾರ ಸಂಸ್ಕರಣೆ ವಿಷಯಕ್ಕೆ ಒತ್ತು ನೀಡುತ್ತಿರುವುದಾಗಿ ತಿಳಿಸಿದ ಅವರು, ಆಹಾರದ ಜೊತೆಗೆ ಪೌಷ್ಠಿಕತೆಯೂ ಮುಖ್ಯ. ಸಂಸ್ಕರಿತ ಆಹಾರದಲ್ಲಿ ಪೌಷ್ಠಿಕತೆ ತರಲು ವೈಜ್ಞಾನಿಕ ವಿಧಾನಗಳ ಅಗತ್ಯವಿದೆ ಎಂದು ಹೇಳಿದರು.

ಬ್ರೆಡ್‌ನಲ್ಲಿ ಮೈದಾ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಉತ್ತಮವಲ್ಲ. ಪೌಷ್ಠಿಕತೆ ಹೆಚ್ಚಾಗಿರುವ ಗೋಧಿ ಇತ್ಯಾದಿಗಳನ್ನು ಬಳಸಿಯೂ ಬ್ರೆಡ್‌ಗಳನ್ನು ಮಾಡಬಹುದು. ಇಂತಹ ಪೌಷ್ಠಿಕತೆಯ ಕೋರ್ಸ್‌ಗಾಗಿ ಘಟಕವೊಂದನ್ನು ತೆರೆಯುವ ಉದ್ದೇಶವಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ 200 ಕೋಟಿ ರೂ.ಗಳವರೆಗೆ ನೆರವು ಸಿಗುವ ನಿರೀಕ್ಷೆ ಇದೆ ಎಂದವರು ಹೇಳಿದ್ದಾರೆ.

ಹಾಲುವರ್ತಿಯಲ್ಲಿ 68 ಎಕರೆ ಹಾಗೂ ಉಳುಪಿನ ಕಟ್ಟೆಯಲ್ಲಿ 17 ಎಕರೆ ಜಾಗ ಇದೆ. ಈ ಜಾಗವನ್ನು ಬಳಸಿಕೊಂಡು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಚಿಂತನೆ ನಡೆದಿದೆ ಎಂದವರು ಹೇಳಿದರು.

ಮಧ್ಯ ಕರ್ನಾಟಕದಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲ. ಇದಕ್ಕಾಗಿ ಜಿಲ್ಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಮಾದರಿಯ ಕ್ರೀಡಾಂಗಣ ಸ್ಥಾಪಿಸುವ ಯೋಚನೆಯೂ ಇದೆ ಎಂದು ಹಲಸೆ ತಿಳಿಸಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪ್ರದರ್ಶನ ಕಲೆಗಳಿಗೆ ಒತ್ತು ನೀಡಲು ಸೂಚನೆ ನೀಡಲಾಗಿದೆ. ಅದರ ಅನ್ವಯ ಈ ವರ್ಷ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಗಾಯನ, ನೃತ್ಯ ಮುಂತಾದ ಪ್ರದರ್ಶನ ಕಲೆಗಳ ಅಲ್ಪಾವಧಿ ಹಾಗೂ ಡಿಪ್ಲೋಮಾ ಕೋರ್ಸ್‌ ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ವಿಶ್ವವಿದ್ಯಾನಿಲಯದಲ್ಲಿ ಕೌಶಲ್ಯಾಭಿವೃದ್ಧಿಗೆ ನಿರಂತರ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕೌಶಲ್ಯ ಹೆಚ್ಚಿಸಲು ಭಾಷಾ ಕಂಪ್ಯೂಟರ್ ಲ್ಯಾಬ್ ತೆರೆಯಲಾಗಿದೆ. ಪ್ರಸಕ್ತ 150 ಕಂಪ್ಯೂಟರ್‌ಗಳನ್ನು ಬಳಸಿ ಕೌಶಲ್ಯ ವೃದ್ಧಿಸಲಾಗುತ್ತಿದೆ. ಇದೇ ರೀತಿ ಐದೂ ಕೌಶಲ್ಯ ತರಬೇತಿಗಳನ್ನು ಬಳಸಿಕೊಳ್ಳುವ ಉದ್ದೇಶವಿದೆ ಎಂದವರು ವಿವರಿಸಿದ್ದಾರೆ.

error: Content is protected !!