ಮಲೇಬೆನ್ನೂರು, ಏ.19 – ರಾಮನವಮಿ ದಿನದಂದು ಜರುಗುವ ಮಲೇಬೆನ್ನೂರು ಹೋಬಳಿಯ ಎಲ್ಲಾ ರಥೋತ್ಸವ, ಜಾತ್ರೆ, ಉತ್ಸವ ಹಾಗೂ ಸಮಾರಂಭಗಳನ್ನು ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ರದ್ದು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಇದೇ ದಿನಾಂಕ 21 ರ ಬುಧವಾರ ಕೊಕ್ಕನೂರು ಆಂಜನೇಯ ಸ್ವಾಮಿ ರಥೋತ್ಸವ ಆಚರಣೆಗೆ ಷರತ್ತು ಬದ್ದ ಅನುಮತಿ ನೀಡಲಾಗಿತ್ತು. ಆದರೀಗ ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಬಾರದ ಕಾರಣ ಹಿಂದಿನ ಆದೇಶವನ್ನು ಹಿಂಪಡೆದು ಯಾವುದೇ ರಥೋತ್ಸವ, ಜಾತ್ರೆ ನಡೆಸದಂತೆ ದೇವಸ್ಥಾನ ಸಮಿತಿಗೆ ಎಸ್ಪಿ ಹಾಗೂ ಹರಿಹರ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಈ ಆದೇಶದ ಪ್ರಕಾರ ಕೊಕ್ಕನೂರು ರಥೋತ್ಸವ ಅಷ್ಟೇ ಅಲ್ಲದೇ, ಹರಳಹಳ್ಳಿ ಹೊಳೆಸಿರಿಗೆರೆ, ಕೆ.ಎನ್.ಹಳ್ಳಿ ಮತ್ತಿತರೆ ಗ್ರಾಮಗಳ ರಥೋತ್ಸವ ಹಾಗೂ ಉಚ್ಛಾಯಗಳನ್ನು ನಡೆಸಲು ಅವಕಾಶ ಇಲ್ಲ ಎನ್ನಲಾಗಿದೆ.