ವೀರಶೈವರಿಗೂ ಒಬಿಸಿ ಮೀಸಲಾತಿ ಬೇಕು : ಉಜ್ಜಿನಿ ಶ್ರೀ

ಪಂಚಮಸಾಲಿ ಹೋರಾಟಕ್ಕೆ ಬೆಂಬಲ

ಹರಪನಹಳ್ಳಿ, ಫೆ.16- ಪಂಚಮಸಾಲಿ ಲಿಂಗಾಯತರ 2ಎ ಮೀಸಲಾತಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಜೊತೆಗೆ ವೀರಶೈವರಿಗೂ ಒಬಿಸಿ ಮೀಸಲಾತಿ ಬೇಕು ಎಂದು ಪಂಚಪೀಠಗಳಲ್ಲೊಂದಾದ ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ವೀರಶೈವ ಲಿಂಗಾಯತರಲ್ಲಿ ಪಂಚಮಸಾಲಿ ಶ್ರೇಷ್ಠ ಒಳಪಂಗಡವಿದ್ದು, ಅವರಿಗೆ ಮೀಸಲಾತಿ ಸಿಕ್ಕರೆ ಸಂತೋಷ. ಅವರ ಪಾದಯಾತ್ರೆಗೆ ನಮ್ಮ ಶಾಖಾ ಮಠದ ಸ್ವಾಮೀಜಿಗಳನ್ನು ಕಳುಹಿಸಿಕೊಟ್ಟಿದ್ದೇವೆ ಎಂದರಲ್ಲದೆ, ನಮ್ಮ ಹೋರಾಟ ಪಂಚಮಸಾಲಿಯವರಿಗೆ ಕೌಂಟರ್ ಅಲ್ಲ ಎಂದು ನುಡಿದರು.

ವೀರಶೈವ ಲಿಂಗಾಯತ ಮೀಸಲಾತಿ ಬೇಡಿಕೆ ಇಂದು ನಿನ್ನೆಯದಲ್ಲ. 1915 ರಲ್ಲಿಯೇ ಒಬಿಸಿ ಹೋರಾಟ ಆರಂಭವಾಗಿದೆ. ಕಳೆದ ವರ್ಷ ಕಾಶಿ ಪೀಠದಲ್ಲಿ ಪ್ರಧಾನಿ ಮೋದಿಯವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಲು ಹೋಗಿದ್ದೆವು. ಆದರೆ ನೇರವಾಗಿ ಪ್ರಧಾನಿಯವರಿಗೆ ಕೊಡಬಾರದು ಎಂದು ಯಡಿಯೂರಪ್ಪನವರು ಹೇಳಿದ್ದರಿಂದ ಕೊಟ್ಟಿರಲಿಲ್ಲ. ಈಗ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದು, ಪರಿಶೀಲಿಸುತ್ತೇವೆ ಎಂದಿದ್ದಾರೆ.

ಫೆ.18-19 ರಂದು ಕೆಲವು ಸ್ವಾಮೀಜಿಗಳನ್ನು ಮತ್ತೆ ಸಿಎಂ ಬಳಿ ಕಳುಹಿಸುತ್ತೇವೆ. ಕಾದು ನೋಡಿ ಮುಂದೆ ಏನು ಮಾಡಬೇಕು ಎಂದು ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು. ವೀರಶೈವರಿಗೆ ಒಬಿಸಿ ಮೀಸಲಾತಿ ಹೋರಾಟ ಕುರಿತು ಸಭೆ ಮಾಡಿರುವುದರಲ್ಲಿ ಸಿಎಂ ಪುತ್ರ ವಿಜೇಂದ್ರ ಅವರ ಕೈವಾಡ ಇಲ್ಲ. ಅವೆಲ್ಲಾ ಸುಳ್ಳು ವದಂತಿ ಎಂದು ಸ್ಪಷ್ಟ ಪಡಿಸಿದರು.

ಉಜ್ಜಯಿನಿ ಪೀಠದ ಪೀಠಾಧಿಪತಿ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶ್ರೀಗಳು ಆ ವಿಷಯವೆಲ್ಲಾ ಭಕ್ತರು ನೋಡಿಕೊಳ್ಳುತ್ತಾರೆ. ಪಂಚಪೀಠದಲ್ಲಿ ಮೂಡಿರುವ ಒಡಕು ಕುರಿತು ಸಹ ಮಾತನಾಡಲು ಇಚ್ಛಿಸಲಿಲ್ಲ. ಈ ಸಂದರ್ಭದಲ್ಲಿ ತೆಗ್ಗಿನ ಮಠದ ವರಸದ್ಯೋಜಾತ ಸ್ವಾಮೀಜಿ ಉಪಸ್ಥಿತರಿದ್ದರು.

error: Content is protected !!