ಅಲ್ಲಮ ಪ್ರಭುದೇವರ ಸ್ಮರಣೆ, ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಮುರುಘಾ ಶರಣರು
ಚಿತ್ರದುರ್ಗ, ಏ. 19- ಅಲ್ಲಮಪ್ರಭು ಎಂದರೆ ನಾಡು ಕಂಡಂತಹ ವಿರಳ ಮತ್ತು ಚಿಕಿತ್ಸಕ ವ್ಯಕ್ತಿತ್ವ. ಆತನ ಬುದ್ಧಿಯು ಒರೆಗಲ್ಲಿಗೆ ತೀಡಿ ತಿಕ್ಕಿ ಅದರಲ್ಲಿ ಪಾಸಾದಾಗ ಒಪ್ಪಿಕೊಳ್ಳುವ ಜಾಯಮಾನ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಅಲ್ಲಮ ಪ್ರಭುದೇವರ ಸ್ಮರಣೆ, ಭಾರತೀಯ ನೂತನ ವರ್ಷಾರಂಭ, ಯುಗಾದಿ ಹಬ್ಬದ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು. ಅಲ್ಲಮಪ್ರಭು ಅವನೊಬ್ಬ ಪರೀಕ್ಷಕ. ಒಳಹೊಕ್ಕು ನೋಡುವವನು. ಆತನದು ಸಾಧನ ಮಾರ್ಗ ಎಂದರು.
ಅಂತರಂಗದ ಅನಾವರಣ ಕೃತಿ ಕುರಿತು ಮಾತನಾಡಿದ ದೂರದರ್ಶನ ವಾರ್ತಾ ವಾಚಕ ಡಾ. ನೂರ್ಸಮದ್ ಅಬ್ಬಲಗೆರೆ, ಕನ್ನಡಕ್ಕೆ 2500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಆದರೂ ಕನ್ನಡದ ಉಳವಿಗಾಗಿ ಹೋರಾಟ ಮಾಡುತ್ತಿದ್ದೇವೆ. ಒಂದು ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ಭಾಷೆಯನ್ನು ಚೆನ್ನಾಗಿ ಕಲಿತುಕೊಂಡಿರಬೇಕು ಎಂದರು.
ಹುಮನಾಬಾದ್ನ ಖ್ಯಾತ ಸಾಹಿತಿ ಡಾ. ಗವಿಸಿದ್ದಪ್ಪ ಎಚ್. ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ 2019ರ ರಾಜ್ಯಮಟ್ಟದ ಕವಿಗೋಷ್ಠಿಯ ಕವಿತೆಗಳ ಸಂಕಲನ `ಅಂತರಂಗದ ಅನಾವರಣ’ ಕೃತಿ ಬಿಡುಗಡೆಗೊಳಿಸಲಾಯಿತು.
ಭೋವಿ ಗುರುಪೀಠದ ಶ್ರೀ ಜ. ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಕಾರ್ಯಕ್ರಮ ಪ್ರಾಯೋಜಕರಾದ ಶ್ರೀಧರ ಪಾಟೀಲ ಜೆಡಿಎಸ್ ಮುಖಂಡರು ದಾವಣಗೆರೆ ಮತ್ತು ಸಂದೀಪ ಗುಂಡಾರ್ಪಿ, ಕು| ತ್ರಿಷಿಕಾ ಜಿ.ಎಸ್. ಚಿತ್ರದುರ್ಗ ಭಾಗವಹಿಸಿದ್ದರು.
ಜಮುರಾ ಕಲಾವಿದರು ವಚನ ಗಾಯನ ಮಾಡಿದರು. ಸಂಗಮೇಶ ಎನ್.ಜವಾದಿ ಸ್ವಾಗತಿಸಿ ದರೆ, ಪಿ.ಟಿ. ಉಮೇಶ್ ನಿರೂಪಿಸಿ, ವಂದಿಸಿದರು.