ಚಿಕನ್, ಮಟನ್ ತ್ಯಾಜ್ಯ ವಿಲೇವಾರಿಗೆ ಟೆಂಡರ್‌

ಚಿಕನ್, ಮಟನ್ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ - Janathavaniಬಕ್ರೀಡ್‌ ಹಬ್ಬದ ಸೌಹಾರ್ದ ಸಭೆಯಲ್ಲಿ ಸಮಸ್ಯೆಗಳ ಅನಾವರಣ

ದಾವಣಗೆರೆ, ಜು. 7 – ನಗರದಲ್ಲಿರುವ ಚಿಕನ್ ಹಾಗೂ ಮಟನ್ ಅಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿಗೆ ಶೀಘ್ರದಲ್ಲೇ ಟೆಂಡರ್ ಕರೆಯ ಲಾಗುವುದು ಎಂದು ಪಾಲಿಕೆ ಮಹಾಪೌರರಾದ ಎಸ್.ಟಿ. ವೀರೇಶ್ ತಿಳಿಸಿದ್ದಾರೆ. ಬಕ್ರೀದ್ ಹಬ್ಬದ ಪ್ರಯುಕ್ತ ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿನ ಕಸದ ಹಾವಳಿ, ಮಾಂಸ ತ್ಯಾಜ್ಯ, ಗೋವಧೆ ಮತ್ತಿತರೆ ವಿಷಯಗಳು ಪ್ರಸ್ತಾಪವಾದವು. 

ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ನಗರದ ಸಾಕಷ್ಟು ಮಟನ್ ಹಾಗೂ ಚಿಕನ್ ಅಂಗಡಿಯವರು ತ್ಯಾಜ್ಯವನ್ನು ಪಾಲಿಕೆ ವಾಹನಗಳಿಗೆ ಕೊಡುತ್ತಿಲ್ಲ. ಈ ತ್ಯಾಜ್ಯವನ್ನು ಬಾತಿ ಬಳಿಯ ನೀರಿಗೆ ಹಾಕಲಾಗುತ್ತಿದೆ. ಈ ಜಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳ ಮೇಲೆ ಹಲ್ಲೆ ನಡೆದ ಘಟನೆಯೂ ನಡೆದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ವೀರೇಶ್, ನಗರದಲ್ಲಿ ಬಿಡಾಡಿ ದನ, ನಾಯಿ ಹಾಗೂ ಹಂದಿಗಳ ಹಾವಳಿ ಸಾಕಷ್ಟು ದಿನಗಳಿಂದ ಇದೆ. ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೆಬ್ಬಾಳು ಬಳಿ ವರಾಹ ಶಾಲೆ ನಿರ್ಮಿಸಲಾಗುತ್ತಿದೆ. ಇಲ್ಲಿ ಸೌಲಭ್ಯ ಕಲ್ಪಿಸುವ ಮೂಲಕ ಹಂದಿಗಳ ಸ್ಥಳಾಂತರಕ್ಕೆ ಮನವೊಲಿಸಲಾಗುತ್ತಿದೆ ಎಂದು ತಿಳಿಸಿದರು.

ಚಿಕನ್ ಹಾಗೂ ಮಟನ್ ತ್ಯಾಜ್ಯವನ್ನು ಖಾಸಗಿ ಏಜೆನ್ಸಿ ಮೂಲಕ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಟೆಂಡರ್ ಕರೆಯಲಾಗುವುದು ಎಂದು ಅವರು ಭರವಸೆ ನೀಡಿದರು.

ಹಿಂದೂ ಜಾಗರಣ ವೇದಿಕೆಯ ಸತೀಶ್ ಪೂಜಾರ್ ಮಾತನಾಡಿ, ರಾಜ್ಯ ಸರ್ಕಾರ ಗೋಹತ್ಯೆ ನಿಷೇಧಿಸಿದೆ. ಆದರೂ, ಕಳೆದ ವರ್ಷ ಕೆಲವೆಡೆ ಗೋವುಗಳ ಸಾಗಣೆ ನಡೆದಿತ್ತು. ಈ ಬಗ್ಗೆ ದೂರುಗಳನ್ನು ದಾಖಲಿಸಲಾಗಿತ್ತು. ಬಿಡಾಡಿ ದನಗಳ ಸಮಸ್ಯೆ ನಿವಾರಿಸುವ ಜೊತೆಗೆ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸಿ ಎಂದು ಒತ್ತಾಯಿಸಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಕಳೆದ ವರ್ಷದಂತೆ ಈ ಬಾರಿಯೂ ಬಕ್ರೀದ್ ವೇಳೆ ನೀರು ಹಾಗೂ ಸ್ವಚ್ಛತೆ ವ್ಯವಸ್ಥೆ ಮಾಡುತ್ತೇವೆ. ಇದಕ್ಕಾಗಿ ಪಾಲಿಕೆ ಸದಸ್ಯರ ಮಾರ್ಗದರ್ಶನ ಪಡೆಯಲಾಗುವುದು ಎಂದರು.

ಸೌಹಾರ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್‌, ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್, ಡಿ.ಹೆಚ್.ಒ. ಡಾ. ನಾಗರಾಜ್, ಎ.ಎಸ್.ಪಿ. ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!