ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಟಿ.ಓಬಳಪ್ಪ ಅಭಿಮತ
ಮಲೇಬೆನ್ನೂರು, ಏ.18- ನಿಜವಾದ ಇತಿಹಾಸವುಳ್ಳ ನಾವು ಎಂದೆಂದಿಗೂ ನಾಯಕ ರಾಗಿಯೇ ಇರೋಣ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆಡಳಿತಾಧಿಕಾರಿ ಟಿ.ಓಬಳಪ್ಪ ಸಮಾಜಕ್ಕೆ ಕರೆ ನೀಡಿದರು.
ಅವರು ಭಾನುವಾರ ಪಟ್ಟಣದ ನಂದಿಗುಡಿ ರಸ್ತೆಯಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ಹರಿಹರ ತಾ. ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಹಕ್ಕ-ಬುಕ್ಕರು ಸ್ಥಾಪಿಸಿದ ಹಂಪಿ ವಿಜಯನಗರ ಸಾಮ್ರಾಜ್ಯದ 685ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವರ್ಷಗಳಿಂದ ಈ ನಾಡಿಗೆ, ದೇಶಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡಿರುವ ವಾಲ್ಮೀಕಿ ನಾಯಕ ಸಮಾಜ ಇತರರಿಗೆ ಮಾದರಿಯಾಗಿದೆ.
ವಾಲ್ಮೀಕಿ, ಏಕಲವ್ಯ, ಬೇಡರ ಕಣ್ಣಪ್ಪ, ಸಿಂಧೂರ ಲಕ್ಷ್ಮಣ, ಹಲಗಲಿ ಬೇಡರು, ಚಿತ್ರದುರ್ಗ ಮತ್ತು ಸುರಪುರದ ನಾಯಕರು, ಹಕ್ಕ-ಬುಕ್ಕರು ಸೇರಿದಂತೆ ಇನ್ನೂ ಅನೇಕ ಮಹಾನ್ ವ್ಯಕ್ತಿಗಳನ್ನು ನೀಡಿದ ವಾಲ್ಮೀಕಿ ನಾಯಕ ಸಮಾಜದ ನಾವು ಸ್ವಾಭಿಮಾನಿಗಳಾಗಿ, ಶೂರರಾಗಿ ಬದುಕುತ್ತಿದ್ದೇವೆ.
ವಾಲ್ಮೀಕಿ ಗುರುಪೀಠ ಸ್ಥಾಪನೆ ನಂತರ ನಮ್ಮ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಶ್ರೀಗಳು ಈ ಸಮಾಜಕ್ಕೆ ಹೊಸ ದಿಕ್ಕು ತೋರಿಸಿದರೆ, ಈಗಿನ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಸಮಾಜಕ್ಕೆ ಸಿಗಬೇಕಾದ ಸಂವಿಧಾನಿಕ ಹಕ್ಕುಗಳಿಗಾಗಿ ಪಾದಯಾತ್ರೆ ಮಾಡಿ ರಾಜ್ಯದ ಗಮನ ಸೆಳೆದರು.
ಅಲ್ಲದೇ, ವಾಲ್ಮೀಕಿ ಜಾತ್ರೆ ಮೂಲಕ ನಾಡಿನ ಮೂಲೆ, ಮೂಲೆಯಿಂದ ಸಮಾಜದವರು ರಾಜನಹಳ್ಳಿ ಮಠಕ್ಕೆ ಬರುವಂತೆ ಮಾಡಿ, ಸಮಾಜವನ್ನು ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಬಲಗೊಳಿಸುವ ಪ್ರಯತ್ನ ಮಾಡಿರುವುದು ಸಂತಸ ತಂದಿದೆ.
ಹಕ್ಕ-ಬುಕ್ಕರು ಸೇರಿದಂತೆ ಎಲ್ಲಾ ಮಹಾನ್ ವ್ಯಕ್ತಿಗಳ ಸಾಧನೆ, ಹೋರಾಟದ ಬಗ್ಗೆ ಪ್ರತಿ ಹಳ್ಳಿ ಯಲ್ಲೂ ಇಂತಹ ಕಾರ್ಯಕ್ರಮಗಳನ್ನು ನಡೆಸಬೇ ಕೆಂದು ಟಿ.ಓಬಳಪ್ಪ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿಡಬ್ಲ್ಯೂಡಿ ಇಂಜಿನಿಯರ್ ಬಿ.ಜಿ.ಶಿವಮೂರ್ತಿ ಅವರು, ಸಮಾಜದ ಮಹಾನ್ ವ್ಯಕ್ತಿಗಳ ಬಗ್ಗೆ ಪ್ರಚಾರ ಪಡಿಸುವ ಕೆಲಸದಲ್ಲಿ ನಾವು ಹಿಂದೆ ಇದ್ದೇವೆ. ಪ್ರತಿ ಮನೆ-ಮನಗಳಲ್ಲೂ ಇಂತಹ ವ್ಯಕ್ತಿಗಳ ಫೋಟೋ ಹಾಕಿ, ಅವರ ಸಾಧನೆ ಬಗ್ಗೆ ತಮ್ಮ ಮಕ್ಕಳಿಗೆ ತಿಳಿಸಿ ಎಂದರು.
ಹನಗವಾಡಿ ಹನುಮಂತಪ್ಪ ಮಾತನಾಡಿ, ಇನ್ನು ಮುಂದೆ ಪ್ರತಿವರ್ಷ ಹರಿಹರ ತಾಲ್ಲೂಕಿ ನಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನಾ ದಿನಾಚರಣೆ ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ಜಿಗಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕರಿಯಮ್ಮ ಚಂದ್ರಶೇಖರ್, ಹೊಳೆಸಿರಿಗೆರೆ ಗ್ರಾ.ಪಂ. ಅಧ್ಯಕ್ಷೆ ಕಾವ್ಯ ಮಂಜುನಾಥ್, ರಾಜನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಲಂಕೇಶ್, ನಂದಿಗಾವಿ ಗ್ರಾ.ಪಂ. ಅಧ್ಯಕ್ಷೆ ಗೀತಮ್ಮ ಬಸವರಾಜಪ್ಪ, ಬೆಳ್ಳೂಡಿ ಗ್ರಾ.ಪಂ. ಉಪಾಧ್ಯಕ್ಷ ಕೆ.ಹೆಚ್.ಮಂಜುನಾಥ್, ಹಾಲಿವಾಣ ಗ್ರಾ.ಪಂ. ಉಪಾಧ್ಯಕ್ಷೆ ಅಂಜಿತ ಸಂತೋಷ್, ಟ್ರುಮಿನಲ್ ಸದಸ್ಯ ಹಾಲಿವಾಣದ ತಿಪ್ಪೇಶ್ ಅವರನ್ನು ಸನ್ಮಾನಿಸಲಾಯಿತು.
ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಕೆ.ಬಿ.ಮಂಜುನಾಥ್, ಹರಿಹರ ನಗರಸಭೆ ಸದಸ್ಯ ದಿನೇಶ್ ಬಾಬು, ಜಿ.ಬೇವಿನಹಳ್ಳಿಯ ಬಂಗಾರಪ್ಪ ವೇದಿಕೆಯಲ್ಲಿದ್ದರು.
ಕೊಕ್ಕನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಹೆಚ್.ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಹರಿಹರದ ಪಾರ್ವತಿ, ಶಿಕ್ಷಕ ವಾಸನ ಮಹಾಂತೇಶ್, ಮುಖಂಡರಾದ ಕೊಕ್ಕನೂರು ಸೋಮಶೇಖರ್, ಜಿಗಳಿಯ ಬಿಳಸನೂರು ಚಂದ್ರಪ್ಪ, ಕೆ.ಎಸ್.ನಂದ್ಯೆಪ್ಪ, ಕೆ.ಆರ್.ಸಿದ್ದವೀರಪ್ಪ, ಹೆಚ್.ಟಿ.ಅಶೋಕ್, ನಿಟ್ಟುವಳ್ಳಿ ನಂದ್ಯೆಪ್ಪ, ಜಿ.ಎ.ಕಿರಣ್, ಮೆಣಸಿನಹಾಳ್ ಬಸವರಾಜ್, ಹೊಳೆಸಿರಿಗೆರೆಯ ಪರಶುರಾಮ್, ಜಿ.ಬೇವಿನಹಳ್ಳಿಯ ಎಂ.ಚಂದ್ರಪ್ಪ, ಹೆಚ್.ರಂಗನಾಥ್, ಮಲೇಬೆನ್ನೂರಿನ ಪಾಳೇಗಾರ್ ನಾಗರಾಜ್, ಯಲ್ಲಪ್ಪ, ಟಿ.ಬಸವರಾಜ್, ಭಜರಂಗ ದಳದ ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.
ಟಿ.ಗಜೇಂದ್ರಪ್ಪ ಪ್ರಾರ್ಥಿಸಿದರು. ಪತ್ರಕರ್ತ ಜಿಗಳಿ ಪ್ರಕಾಶ್ ಸ್ವಾಗತಿಸಿದರು. ಶಿಕ್ಷಕ ಜಿ.ಆರ್.ನಾಗರಾಜ್ ನಿರೂಪಿಸಿದರೆ, ಧೂಳೆಹೊಳೆ ಶಶಿ ವಂದಿಸಿದರು.