ಹೊನ್ನಾಳಿ : ಹೆಸರಿಟ್ಟ ವೃತ್ತಕ್ಕೆ ಮತ್ತೆ ನಾಮಕರಣ; ಕನಕ ಯುವ ವೇದಿಕೆ ಆಕ್ಷೇಪ

ಹೊನ್ನಾಳಿ, ಏ.16- ಭಕ್ತ ಕನಕದಾಸ ವೃತ್ತ ಎಂದು ಹೆಸರಿಡಲಾಗಿರುವ ವೃತ್ತಕ್ಕೆ ಕೆಲ ದಲಿತ ಮುಖಂಡರು ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಿ ಎಂದು ತಹಶೀಲ್ದಾರ್ ಅವರಿಗೆ ಮನವಿ ನೀಡಿರುವುದನ್ನು ಕನಕ ಯುವ ವೇದಿಕೆ ಅಧ್ಯಕ್ಷ ಸತ್ತಿಗೆ ಸುರೇಶ್ ಖಂಡಿಸಿದ್ದಾರೆ.

 ಅವರು ಗ್ರೇಡ್-2 ತಹಶೀಲ್ದಾರ್ ಸುರೇಶ್ ನಾಯ್ಕ ಹಾಗೂ ಪ.ಪಂ. ಮುಖ್ಯಾಧಿಕಾರಿ ಅಶೋಕ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಆಗಸ್ಟ್ 2, 2007 ರಂದು ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ  ಶ್ರೀ ಭಕ್ತ ಕನಕದಾಸ ವೃತ್ತ ಎಂದು ನಾಮಕರಣ ಮಾಡುವಂತೆ ಮನವಿ ಮಾಡಿದ್ದು, ಅದರಂತೆ ಸಭೆಯು ಕೈಗೊಂಡ ನಿರ್ಣಯದಲ್ಲಿ ಸರ್ವಾನುಮತದಿಂದ ಈ ಹೆಸರಿಡಲು ತೀರ್ಮಾನಿಸಲಾಗಿತ್ತು. ಅಂದಿನಿಂದ  ಆ ವೃತ್ತಕ್ಕೆ ಶ್ರೀ ಭಕ್ತ ಕನಕದಾಸ ವೃತ್ತ ಎಂದು ನಾಮಫಲಕ ಹಾಕಲಾಗಿತ್ತು.  ಪ್ರತಿ ವರ್ಷ ಕನಕ ಜಯಂತಿಯಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿತ್ತು ಎಂದರು.

ಅಂಬೇಡ್ಕರ್ ಅವರು ಈ ದೇಶದ ಮಹಾನ್ ಚೇತನ, ಅವರ ಬಗ್ಗೆ ನಮಗೆ ಅಪಾರ ಗೌರವವಿದೆ.  ಈಗಾಗಲೇ ನಾಮಕರಣ ಮಾಡಿರುವ ವೃತ್ತಕ್ಕೆ ಬದಲಿ ಹೆಸರಿಡದೇ ಇರುವ ವೃತ್ತಕ್ಕೆ ಅಂಬೇಡ್ಕರ್ ಹೆಸರು ಇಡಲಿ, ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಈ ಸಂದರ್ಭದಲ್ಲಿ  ಸಾಮಾಜಿಕ ಹೋರಾಟಗಾರ ಕತ್ತಿಗೆ ನಾಗಣ್ಣ, ಕುಮಾರಸ್ವಾಮಿ, ಎನ್‍ಎಸ್‍ಯುಐ ಅಧ್ಯಕ್ಷ ಮನು ವಾಲಜ್ಜಿ, ವೇದಿಕೆಯ ಮುಖಂಡರಾದ ಮಲ್ಲೇಶ್ ಹರಳಹಳ್ಳಿ, ಎಚ್. ಕಡದಕಟ್ಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮಾದಪ್ಪ, ಯೋಗೇಶ್, ಚಂದ್ರಶೇಖರ್, ಆಪಿನಕಟ್ಟೆ  ಶ್ರೀಧರ್,  ಭರ್ಮಪ್ಪ,  ಎಸ್.ಎಸ್. ಬೀರಪ್ಪ, ವಸಂತ್ ಹೊಸಕೇರಿ ಇನ್ನಿತರರು ಹಾಜರಿದ್ದರು.

error: Content is protected !!