ಆಕ್ಷನ್ ಪ್ರಿನ್ಸಿ ಧ್ರುವ ಸರ್ಜಾ ಅಭಿನಯದ ಪೊಗರು ಕನ್ನಡ ಚಿತ್ರದ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮವು ದಾವಣಗೆರೆ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಸಂಜೆ ನಡೆಯಿತು.
ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮಾತನಾಡಿದರು. ಶಾಸಕ ರೇಣುಕಾಚಾರ್ಯ, ನಟರಾದ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.
ದಾವಣಗೆರೆ, ಫೆ.15- ಆಕ್ಷನ್ ಪ್ರಿನ್ಸ್ ಬಿರುದು ಪಡೆದ ನಟ ಧ್ರುವ ಸರ್ಜಾ ಅವರ ನಟನೆಯ ಬೆಳ್ಳಿ ತೆರೆ ಮೇಲೆ ಬಿಡುಗಡೆಗೊಳ್ಳಲಿರುವ `ಪೊಗರು’ ಸಿನಿಮಾದ ಆಡಿಯೋ ಬೆಣ್ಣೆನಗರಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು.
ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಇಂದು ಸಂಜೆ ಸಹಸ್ರಾರು ಅಭಿಮಾನಿಗಳು, ಸಿನಿ ಪ್ರೇಕ್ಷಕರಿಗೆ ಸಿನಿಮಾದ ಹಾಡುಗಳನ್ನು ಕೇಳಿಸಿ, ನೃತ್ಯದ ಮುಖೇನ ಮನರಂಜಿಸುವ ಮೂಲಕ ಆಡಿಯೋ ಬಿಡುಗಡೆಗೊಂಡಿತು.
ಅತಿಥಿಗಳ ಶುಭ ಹಾರೈಕೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಅವರು ಅವರು ಮಾತನಾಡಿ, ಧ್ರುವ ಸರ್ಜಾ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಉತ್ತಮ ಚಿತ್ರ ನೀಡಲಿ ಎಂದು ಆಶಿಸಿದರು. ಇದೇ ವೇಳೆ ಬಿ.ಎ. ಬಸವರಾಜ್ ಅವರಿಗೆ ಬೆಳ್ಳಿ ಕಿರೀಟ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಚಿರಂಜೀವಿ ಸರ್ಜಾ ಅವರನ್ನು ಸ್ಮರಿಸಿದರು. ನಾನು ಸಂಸದನಾದ ನಂತರ ದಾವಣಗೆರೆ ಯಲ್ಲಿ ಮೂರನೇ ಬಾರಿ ಚಿತ್ರವೊಂದರ ಆಡಿಯೋ ಬಿಡುಗಡೆ ನಡೆಯುತ್ತಿದೆ. ದಾವಣಗೆರೆ ಜನರು ಪೊಗರು ಚಿತ್ರ ನೋಡುವ ಮೂಲಕ ಹರಸಬೇಕು. ಪೊಗರು ಚಿತ್ರದ ಹಾಡೊಂದನ್ನು ಇಡೀ ವಿಶ್ವದಾದ್ಯಂತ 20 ಕೋಟಿ ಜನರು ವೀಕ್ಷಿಸಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ನಮ್ಮ ತಂದೆ ಜಿ. ಮಲ್ಲಿಕಾರ್ಜುನಪ್ಪನವರು 1969ರಲ್ಲಿ ಅರಿಶಿಣ ಕುಂಕುಮ ಚಿತ್ರ ನಿರ್ಮಿಸಿದ್ದಾಗ ನಾನು ಸಹ ಆ ಚಿತ್ರದಲ್ಲಿ ಬಣ್ಣ ಹಚ್ಚಿದ್ದೆ ಎಂದು ಮೆಲುಕು ಹಾಕಿದರು.
ಪೊಗರು ಆಡಿಯೋ ರಿಲೀಸ್ಗೆ ಟಗರು: ಪೊಗರು ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಿನಿಮಾ ನಿರ್ದೇಶಕ ನಂದಕಿಶೋರ್ ಅವರ ತಂದೆ ಸುಧೀರ್ ಹೆಸರಾಂತ ಕಲಾವಿದರು. ಹಿರಿಯ ಕಲಾವಿದ ಶಕ್ತಿ ಪ್ರಸಾದ್ ಅವರ ಮಗ ಅರ್ಜುನ್ ಸರ್ಜಾ ಮತ್ತು ಮೊಮ್ಮಗ ಧ್ರುವ ಸರ್ಜಾ. ನಟನೆ ಎಂಬುದು ರಕ್ತಗತವಾಗುತ್ತಾ ಬಂದಿದೆ. ಕುಟುಂಬವೇ ಕಲಾ ಸೇವೆ ಮಾಡುತ್ತಿದೆ. ಧ್ರುವ ಸರ್ಜಾ ಅವರ ಮೂರು ಸಿನಿಮಾಗಳು ಯಶಸ್ವಿಯಾಗಿದ್ದು, ನಾಲ್ಕನೇ ಸಿನಿಮಾ ಪೊಗರು ಸಹ ಯಶಸ್ವಿ ಕಾಣಲಿದೆ. ಪ್ರೇಕ್ಷಕರು ಈ ಸಿನಿಮಾ ಮೆಚ್ಚಿ ಸ್ವಾಗತಿಸಲಿ ದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾರ್ಚಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವೇದಿಕೆಗೆ ರಾಘವೇಂದ್ರ ರಾಜ್ ಕುಮಾರ್: ಪೊಗರು ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಸಹ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೊಗರು ಸಿನಿಮಾ ಹಾಡು ಕೈಲಾಸ, ಬ್ರಹ್ಮಾಂಡ, ವೈಕುಂಠ ಮೂರರ ಮಿಶ್ರಣದಂತಿದೆ ಎಂದು ಹೇಳಿದರು.
ಸಿನಿಮಾ ನಿರ್ದೇಶಕ ನಂದಕಿಶೋರ್ ಮಾತನಾಡಿದರು. ಪೊಗರು ಸಿನಿಮಾದಲ್ಲಿನ ತಾಯಿ ಕುರಿತಾದ ಲಿರಿಕಲ್ ವಿಡಿಯೋವನ್ನು ನಟ ಅರ್ಜುನ್ ಸರ್ಜಾ ಬಿಡುಗಡೆ ಮಾಡಿದರು. ಎಸ್ಪಿ ಹನುಮಂತರಾಯ ಭಾಗವಹಿಸಿದ್ದರು.
ನೆನಪಿನ ಭಾವುಕ: ಆರಂಭದಲ್ಲಿ ನಟ ಚಿರಂಜೀವಿ ಸರ್ಜಾ ಅವರ ಪರಿಚಯ ಮಾಡುವಾಗ ಪ್ರೇಕ್ಷಕರು ಮೂಕರಾದರು. ವೇದಿಕೆ ಬಳಿ ಕುಳಿತು ವೀಕ್ಷಿಸುತ್ತಿದ್ದ ಮಾವ ಅರ್ಜುನ್ ಸರ್ಜಾ ಅಳಿಯನ ನೆನಪು ಮಾಡಿಕೊಂಡು ಕಣ್ಣಂಚಲಿ ನೀರು ತುಂಬಿಕೊಂಡು ಭಾವುಕರಾದರು. ಧ್ರುವ ಸರ್ಜಾ ಅವರ ಪೊಗರು ಸಿನಿಮಾದ ಹಾಡುಗಳು, ನೃತ್ಯ ಹಾಗೂ ಅಭಿಮಾನಿಗಳ ಅಭಿಮಾನಕ್ಕೆ ಸಂತಸಗೊಂಡರು. ಪಕ್ಕದಲ್ಲೇ ಕುಳಿತಿದ್ದ ಧ್ರುವ ಸರ್ಜಾ ಸಹ ಅಣ್ಣನ ನೆನೆದರು. ಮಾವನೊಂದಿಗೆ ತಮ್ಮ ಸಿನಿಮಾದ ಆಡಿಯೋ ರಿಲೀಸ್ ಯಶಸ್ಸಿಗೆ ಹರುಷಗೊಂಡರು.
ದಾವಣಗೆರೆ ಜನರ ಅಭಿಮಾನಕ್ಕೆ ಚಿರ ಋಣಿ. ಅದ್ದೂರಿ ಸಿನಿಮಾ ಸಂದರ್ಭದಲ್ಲೂ ನಗರಕ್ಕೆ ಬಂದಿದ್ದೆ. ನಿಮ್ಮ ಅಭಿಮಾನ ಹೀಗೆ ಇರಲಿ. ಕೇವಲ ಅವರಿವರ ಅಭಿಮಾನಿಗಳಾಗದೇ, ಕನ್ನಡ ಸಿನಿಮಾ ರಂಗದ ಅಭಿಮಾನಿಗಳಾಗಿ. ನನ್ನ ಸಿನಿಮಾಗ ಳನ್ನಷ್ಟೇ ಅಲ್ಲದೇ ಕನ್ನಡ ಸಿನಿಮಾಗಳನ್ನು ಪ್ರೀತಿಯಿಂದ ವೀಕ್ಷಿಸಿ ಹರಸಿ.
– ಧ್ರುವ ಸರ್ಜಾ
ಪ್ರೇಕ್ಷಕರ ಅಭಿಮಾನವೇ ನಮಗೆ ಉಡುಗೊರೆ
ಪೊಗರು ಸಿನಿಮಾ ಉತ್ತಮ ಚಿತ್ರವಾ ಗಿದ್ದು, ಸಾಕಷ್ಟು ಶ್ರಮ ಪಟ್ಟಿದ್ದಾರೆ. ಕೇವಲ ಹಣ ಮಾಡುವುದೇ ಗುರಿಯಲ್ಲ. ಪ್ರೇಕ್ಷಕರಿಗೆ ಉತ್ತಮ ಸಿನಿಮಾ ನೀಡಬೇಕೆಂಬ ಜವಾ ಬ್ದಾರಿ ಇರುವ ಕಾರಣಕ್ಕೆ ಎರಡು ವರ್ಷಕ್ಕೆ ಉತ್ತಮ ಸಿನಿಮಾ ತಯಾರಿಸಲಾಗಿದೆ. ಕೊರೊನಾ ಕಾರಣ ಆಡಿಯೋ ಮತ್ತು ಸಿನಿಮಾ ಬಿಡುಗಡೆ ತಡವಾಗಿದೆ. ಧ್ರುವ ಸರ್ಜಾ ನನಗೆ ಮಗನಾಗಿದ್ದಾನೆ. ಪ್ರೇಕ್ಷಕರ ಅಭಿಮಾನವೇ ನಮಗೆ ಉಡುಗೊರೆ. ಅದನ್ನು ಉಳಿಸಿಕೊಳ್ಳುತ್ತಾನೆ. ಫೆ.19ಕ್ಕೆ ಬಿಡುಗಡೆಯಾಗಲಿರುವ ಸಿನಿಮಾ ವೀಕ್ಷಿಸಿ ಹಾರೈಸಿ. ಡಾ. ರಾಜ್ ಕುಮಾರ್, ವಿಷ್ಣು ವರ್ಧನ್, ಅಂಬರೀಷ್, ಶಂಕರ್ ನಾಗ್, ದಿನೇಶ್, ಶಕ್ತಿ ಪ್ರಸಾದ್ ಸೇರಿದಂತೆ ಅನೇಕ ಹಿರಿಯ ನಟರು ಕನ್ನಡ ಸಿನಿಮಾ ರಂಗವನ್ನು ಹಾಗೂ ಕಲಾಸಕ್ತರನ್ನು ಬೆಳೆಸಿದ್ದಾರೆ. ಅವರು ಗಳ ಆಶೀರ್ವಾದ ಪೊಗರು ಸಿನಿಮಾಗಷ್ಟೇ ಅಲ್ಲ ಎಲ್ಲಾ ಕನ್ನಡ ಸಿನಿಮಾಗಳ ಮೇಲಿದೆ.
– ಅರ್ಜುನ್ ಸರ್ಜಾ
ಕಿಕ್ಕಿರಿದ್ದು ಸೇರಿದ್ದ ಅಭಿಮಾನಿಗಳು-ಸಿನಿ ಪ್ರೇಕ್ಷಕರು: ಪೊಗರು ಸಿನಿಮಾದ ಇಂಟ್ರಡಕ್ಷನ್ ಸಾಂಗ್ ಅನ್ನು ಎರಡು ಬಾರಿ ಹಾಕಲಾಯಿತು. ಸಿನಿಮಾದ ಡೈಲಾಗ್ ಟ್ರೈಲರ್ ಸಹ ಹಾಕಲಾಯಿತು. ಪೊಗರು, ಅದ್ದೂರಿ, ಬಹದ್ದೂರ್ ಸೇರಿದಂತೆ ಧ್ರುವ ಸರ್ಜಾ ಸಿನಿಮಾದ ಹಾಡುಗಳ ನೃತ್ಯ ನೆರೆದಿದ್ದ ಅಭಿಮಾನಿಗಳ ಮನತಣಿಸಿತು. ಸರ್ಜಾ ಪೊಗರು ಸಿನಿಮಾದ ಐ ಆಮ್ ನಟೋರಿಯಸ್ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಕೊನೆಯಲ್ಲಿ ಸಿನಿಮಾದ ಹಾಡಿಗೆ ನೃತ್ಯ ಮಾಡಿ, ನಂತರ ಪುನಃ ಡೈಲಾಗ್ ಹೇಳಿ ಮನರಂಜಿಸಿದರು. ಖರಾಬು ಹಾಡು ಸೇರಿದಂತೆ ಸಿನಿಮಾದ ಹಾಡು, ಡೈಲಾಗ್ ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಅಭಿಮಾನಿಗಳು, ಸಿನಿ ಪ್ರೇಕ್ಷಕರ ದಂಡೇ ಹರಿದು ಬಂದಿತ್ತು. ನೆಚ್ಚಿನ ನಟನ ಕಣ್ತುಂಬಿಕೊಳ್ಳಲು, ಮೊಬೈಲ್ ನಲ್ಲಿ ಸೆರೆ ಹಿಡಿಯಲು ಪೊಲೀಸರ ಭಯವಿಲ್ಲದೇ ಹಾಕಿದ್ದ ಬ್ಯಾರಿಕೇಡ್ಗಳನ್ನು ದಾಟಿ ವೇದಿಕೆ ಬಳಿ ಬಂದು ಅಭಿಮಾನ ವ್ಯಕ್ತಪಡಿಸಿದರು.
ಚಂದನ್ ಶೆಟ್ಟಿ ಹವಾ: ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಡಿದ ಖರಾಬು ಬಾಸು ಕರಾಬು ಹಾಡಿಗೆ ಅಭಿಮಾನಿಗಳು ಮನಸೋತರು. ಈ ವೇಳೆ ಮಾತನಾಡಿದ ಚಂದನ್ ಶೆಟ್ಟಿ, ಸಂಗೀತ ನಿರ್ದೇಶಕರಾಗಿ ಪೊಗರು ಸಿನಿಮಾ ಮುಖೇನ ಎಂಟ್ರಿ. ಖರಾಬು ಬಾಸು ಖರಾಬು, ಅಣ್ಣನಿಗೆ ಪೊಗರು ಸೇರಿದಂತೆ 3 ಹಾಡುಗಳನ್ನು ತಯಾರು ಮಾಡಲು ಅವಕಾಶ ಸಿಕ್ಕಿದೆ. ಇದು ನನ್ನ ಸಂಗೀತ ಸೇವೆಗೆ ಸಿಕ್ಕ ದೊಡ್ಡ ವೇದಿಕೆ ಎಂದು ಚಂದನ್ ಶೆಟ್ಟಿ ಹರುಷ ವ್ಯಕ್ತಪಡಿಸಿದರು.
ನಿರ್ದೇಶಕ ನಂದಕಿಶೋರ್, ನಿರ್ಮಾಪಕ ಬಿ.ಕೆ. ಗಂಗಾಧರ್, ನೃತ್ಯ ನಿರ್ದೇಶಕ ಮುರಳಿ ಸೇರಿದಂತೆ ಸಿನಿಮಾ ತಂಡ ಸಹ ಖರಾಬು ಹಾಡಿಗೆ ನರ್ತಿಸಿದರು. ಪೊಗರು ಆಡಿಯೊ ಬಿಡುಗಡೆ ಕಾರ್ಯಕ್ರಮಕ್ಕೆ ನಿರೂಪಕಿ ಅನುಶ್ರೀ ಅವರು ತಮ್ಮ ನಿರೂಪಣೆಯಿಂದ ಪ್ರೇಕ್ಷಕರನ್ನು ಹುರಿದುಂಬಿಸಿದರು.