ನನ್ನ ಅವಧಿಯಲ್ಲಿ ಲೆಕ್ಕ ಬಾಕಿ ಇಲ್ಲ: ಎ.ಆರ್. ಉಜ್ಜನಪ್ಪ

ದಾವಣಗೆರೆ, ಏ.15- ತಮ್ಮ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಬೇಕಾದ 10 ಲಕ್ಷ ರೂ. ಹಣ ಬಾಕಿ ಉಳಿಸಿಕೊಂಡಿರುವುದಾಗಿ ಆರ್.ಶಿವಕುಮಾರ ಸ್ವಾಮಿ ಕುರ್ಕಿ ಅವರು ಮಾಡಿದ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ  ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ತಮ್ಮ ಅವಧಿಯಲ್ಲಿ ಖರ್ಚು-ವೆಚ್ಚಗಳ ಲೆಕ್ಕಪತ್ರ ಗಳೊಂದಿಗೆ ವಿವರಣೆ ನೀಡಿದ ಅವರು, ಅಂದಿನ ರಾಜ್ಯಾಧ್ಯಕ್ಷರಾಗಿದ್ದ ಪುಂಡಲೀಕ ಹಾಲಂಬಿ ಅವರು ಮಾರ್ಚ್ ತಿಂಗಳಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಫೆಬ್ರವರಿಯಲ್ಲಿಯೇ ಲೆಕ್ಕ ಪತ್ರ ನೀಡಲು ಕೋರಿದ್ದರ ಮೇರೆಗೆ ನಾವು ಎಲ್ಲಾ ಲೆಕ್ಕದ ವಿವರಗಳನ್ನು ಅಂದೇ ನೀಡಿದ್ದೆವು. ಆದರೂ ಲೆಕ್ಕ ಬಾಕಿ ಇರುವುದಾಗಿ ತೋರಿಸಿರುವುದು ಏಕೆಂದು ಗೊತ್ತಿಲ್ಲ ಎಂದರು.

ಲೆಕ್ಕಪತ್ರದ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿಕೊಟ್ಟ ನಂತರವೇ ಹಣ ಬಿಡುಗಡೆ ಮಾಡುವುದಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸ್ಪಷ್ಟವಾಗಿ ತಿಳಿಸಿದೆ.  ಈ ಹಿಂದಿನ ವರ್ಷಗಳಲ್ಲಿ ಜಿಲ್ಲಾ ಕಸಾಪಗೆ ಅನುದಾನ ಬಿಡುಗಡೆಯಾಗಿದೆ. ನಾವು ಲೆಕ್ಕದ ಬಾಕಿ ವಿವರ ನೀಡಿದ್ದರಿಂದಲೇ ಅನುದಾನ ಬಿಡುಗಡೆಯಾಗಿದೆ ಎಂದರು.

ಜಿಲ್ಲೆ ಹಾಗೂ ತಾಲ್ಲೂಕು ಪರಿಷತ್‌ಗೆ ಪ್ರತ್ಯೇಕ ಸದಸ್ಯರಿರುವುದಿಲ್ಲ. ಎಲ್ಲರೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಆಜೀವ ಸದಸ್ಯರೇ ಆಗಿರುವುದರಿಂದ ಕೇಂದ್ರ ಪರಿಷತ್‌ನಿಂದ ಸಾಮಾನ್ಯ ಸಭೆ ನಡೆಯುತ್ತದೆ ಎಂದರು.

ಕಳ್ಳರ ಜೊತೆ ಬಂದ್ರೆ ಓಟ್ ಕೊಡ್ತಾರಾ? : ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಿವಕುಮಾರ ಸ್ವಾಮಿ ಕುರ್ಕಿ ಅವರು ನನಗೆ ಕರೆ ಮಾಡಿ, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸು ವಂತೆಯೂ, ತಮ್ಮ ಜೊತೆ ಮತಯಾಚನೆಗೆ ಬರುವಂತೆಯೂ ಕೇಳಿಕೊಂಡರು. ಆಗ ನಾನು ಈಗಾಗಲೇ ನೀವು ನಮ್ಮನ್ನು ಕಳ್ಳರೆಂದು ಹೇಳಿದ್ದೀರಿ. ಕಳ್ಳರ ಜೊತೆ ಬಂದರೆ ನಿಮಗೆ ಓಟು ಸಿಗುವುದಿಲ್ಲ. ಒಳ್ಳೆಯವರನ್ನೇ ಕರೆದುಕೊಂಡು ಹೋಗಿ ಎಂದು ಕಾಲ್ ಕಟ್ ಮಾಡಿದೆ ಎಂದು  ಉಜ್ಜನಪ್ಪ ಹೇಳಿದರು.

ನಿಮ್ಮ ಅವಧಿಯಲ್ಲಿ ಕಸಾಪದ ಖರ್ಚು-ವೆಚ್ಚಗಳ ಲೆಕ್ಕ ಪತ್ರ ಇಟ್ಟಿದ್ದೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ, ಲೆಕ್ಕ ಇಡಲು ಗುಮಾಸ್ತರಿಲ್ಲ ಎಂದು ಉಜ್ಜನಪ್ಪ ಉತ್ತರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಮಾತನಾಡುತ್ತಾ, ನನ್ನ ಅವಧಿಯಲ್ಲಿ ಯಾರೊಬ್ಬರಿಂದಲೂ ಹಣ ವಸೂಲಿ ಮಾಡಿಲ್ಲ. ಅಲ್ಲದೆ, ಬಂದ ಅನುದಾನ ಹಾಗೂ ಮಾಡಿದ ಖರ್ಚಿನ ಮಾಹಿತಿಯನ್ನು ವೋಚರ್‌ಗಳ ಸಹಿತ ಕಚೇರಿಯಲ್ಲಿಟ್ಟಿದ್ದೇನೆ. ಯಾವುದೇ ಬಾಕಿ ಇಲ್ಲ ಎಂದು ಪ್ರಮಾಣ ಪತ್ರ ಪಡೆದಿದ್ದೇನೆ ಎಂದು ಹೇಳಿದರು. 

ಸಾಹಿತಿ ಬಾ.ಮ. ಬಸವರಾಜಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!