ಹರಿಹರಕ್ಕೆ ಬೇಕು ವೈದ್ಯಕೀಯ ಕಾಲೇಜು

ಸರ್ಕಾರಕ್ಕೆ ಮನವರಿಕೆ ಮಾಡಿಸುವತ್ತ ‘ಸಮಾನ ಮನಸ್ಕರ ವೇದಿಕೆ’

ಹರಿಹರ, ಜು.5- ದಾವಣಗೆರೆ ಜಿಲ್ಲೆಗೆ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವುದಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ವಿಚಾರ ವಾಗಿದ್ದು, ಕಾಲೇಜು ತೆರೆಯಲು ಹರಿಹರ ಯೋಗ್ಯವಾಗಿದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದಾಗ ಮಾತ್ರ ಇಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಸಾಧ್ಯವಿದೆ  ಎಂದು ಕಾಂಗ್ರೆಸ್ ಮುಖಂಡ ಡಾ. ಶೈಲೇಶ್ ಕುಮಾರ್  ಹೇಳಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಗರದ §ಸಮಾನ ಮನಸ್ಕರ ವೇದಿಕೆ¬ ವತಿಯಿಂದ ಇತ್ತೀಚೆಗೆ ಸರ್ಕಾರ ದಾವಣಗೆರೆ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದು, ಅದನ್ನು ಹರಿಹರ ನಗರದಲ್ಲಿ  ಮಾಡು ವಂತೆ ಅದಕ್ಕೆ ಪೂರಕವಾಗಿ ಹೋರಾಟದ ರೂಪು ರೇಷೆಯ ಬಗ್ಗೆ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 60 ವೈದ್ಯಕೀಯ ಕಾಲೇಜು ಇದ್ದರೂ ಸಹ ದಾವಣಗೆರೆ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಮೆಡಿಕಲ್ ಕಾಲೇಜು ಪ್ರಾರಂಭ ಮಾಡುವುದಕ್ಕೆ ಹೋರಾಟ ನಡೆದು ಕೊಂಡು ಬಂದಿದೆ. ಆದರೆ ಸರ್ಕಾರ ಈಗ ಆದ್ಯತೆ ನೀಡುವುದಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ವೈದ್ಯಕೀಯ ಕಾಲೇಜು ಪ್ರಾರಂಭ ವಾಗುವುದರಿಂದ  ಸಾರ್ವಜನಿಕರಿಗೆ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳು ದೊರೆಯಲು ದಾರಿಯಾಗುತ್ತದೆ. ಮನುಷ್ಯನ ಆರೋಗ್ಯ ಸಮಸ್ಯೆಗಳನ್ನು ಶೀಘ್ರ ಗುಣಪಡಿಸುವ ಅವಕಾಶ ದೊರೆಯುತ್ತದೆ. ಜೊತೆಗೆ ಆರ್ಥಿಕ ಸುಧಾರಣೆ ಆಗಲಿದೆ. ಹರಿಹರ ನಗರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವುದಕ್ಕೆ ನನ್ನ ಸಂಪೂರ್ಣ ಬೆಂಬಲ ಇರುವುದಾಗಿ ಹೇಳಿದರು.

ಜಿಪಂ ಮಾಜಿ ಸದಸ್ಯ ಜೆ.ಎಂ. ನಾಗೇಂದ್ರಪ್ಪ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಸಹ ಹೆಚ್ಚಾಗಿ ಇರುವುದನ್ನು ಕಾಣುತ್ತಿದ್ದೇವೆ. ನಗರದಲ್ಲಿ ಮೆಡಿಕಲ್ ಕಾಲೇಜು ಆರಂಭವಾದರೆ ಆ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಆಗುತ್ತದೆ. ಹೋರಾಟ ಕೈಗೊಳ್ಳುವ ಸಮಯ ಬಂದಾಗ ನಗರದಲ್ಲಿ ಅನೇಕ ಹಿರಿಯರು, ಮಾಜಿ ಶಾಸಕರು,  ವೈದ್ಯರುಗಳ ಸಹಕಾರ ಪಡೆಯುವುದು ಉತ್ತಮ. ಅವರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಹೋರಾಟದಲ್ಲಿ ಜಯ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಹರಿಹರ ನಗರದಲ್ಲಿ ವೈದ್ಯಕೀಯ ಕಾಲೇಜ್ ಪ್ರಾರಂಭ ಮಾಡುವುದಕ್ಕೆ ಎಲ್ಲಾ ರೀತಿಯಿಂದಲೂ ಯೋಗ್ಯವಾಗಿದೆ. ದಾವಣಗೆರೆ ನಗರ ಹರಿಹರ ನಗರದಿಂದ 9  ಕಿ.ಮೀ. ದೂರದಲ್ಲಿದೆ. ಈಗಾಗಲೇ ದಾವಣಗೆರೆ, ಹರಿಹರ ಅವಳಿ ನಗರ ಮಾಡುವ ಸಮಯದಲ್ಲಿ ಹರಿಹರ ನಗರದಲ್ಲಿ ಮೆಡಿಕಲ್ ಕಾಲೇಜ್ ಪ್ರಾರಂಭವಾದರೆ ಎರಡೂ ನಗರದ ಜನತೆಗೆ ಅನುಕೂಲವಾಗಲಿದೆ. ನಮ್ಮದೇ ಸರ್ಕಾರ ಇರುವುದರಿಂದ ನಮ್ಮ ಪಕ್ಷದ ನಾಯಕರಿಗೆ ವಸ್ತುಸ್ಥಿತಿಯನ್ನು ಗಮನಕ್ಕೆ ತರುವ ಕೆಲಸ ಮಾಡುವುದಾಗಿ ಹೇಳಿದರು.

ತಾ.ಪಂ. ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ ಮಾತನಾಡಿ, ನಗರದಲ್ಲಿ ಸರ್ಕಾರಿ ಜಮೀನುಗಳು ಅನ್ಯ ಚಟುವಟಿಕೆಗಳ ತಾಣಗಳಾಗಿವೆ. ಇಂತಹ ಸಮಯದಲ್ಲಿ ಪಕ್ಷ ಮತ್ತು ಜಾತಿ ಭೇದವನ್ನು ಬಿಟ್ಟು ಒಗ್ಗಟ್ಟಿನಿಂದ ಹೋರಾಟ ಮಾಡುವುದಕ್ಕೆ ಮುಂದಾಗೋಣ ಎಂದರು. 

ರೈತ ಮುಖಂಡ ತೇಜಸ್ವಿ ಪಟೇಲ್,  ಹೆಚ್. ನಿಜಗುಣ, ಹೆಚ್. ಕೆ. ಕೊಟ್ರಪ್ಪ, ಎನ್.ಹೆಚ್. ಶ್ರೀನಿವಾಸ್,  ಯೋಗೀಶ್ ಪಾಟೀಲ, ಬಿ.ಕೆ. ಸೈಯದ್ ರೆಹಮಾನ್, ಸಿ.ವಿ. ಪಾಟೀಲ್, ಬಿ. ರೇವಣಸಿದ್ದಪ್ಪ, ಕೃಷ್ಣಮೂರ್ತಿ,  ಮರಿಯೋಜಿರಾವ್,  ಕಲೀಂ ಬಾಷಾ, ಮಹಾಂತೇಶ್, ಅಜಿತ್ ಸಾವಂತ್, ಎಂ. ಚಿದಾನಂದ ಕಂಚಿಕೇರಿ, ಆರ್. ರಾಘವೇಂದ್ರ, ಡಾ, ಜಗನ್ನಾಥ್, ಜಿ.ಕೆ. ಪಂಚಾಕ್ಷರಿ, ಶೇಖರ್ ಗೌಡ, ಟಿ. ಇನಾಯತ್, ಹೆಚ್.ಸಿ. ಕೀರ್ತಿಕುಮಾರ್, ಎನ್.ಇ. ಸುರೇಶ್, ಕೆ.ಜಿ. ಕೃಷ್ಣ, ಜಿ. ಶಂಕರ್‌ಮೂರ್ತಿ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!