ರಾಜಕೀಯ ಪಕ್ಷದವರು ನಾಯಕರನ್ನು ಮೆಚ್ಚಿಸಲು ಜನರನ್ನು ದಿಕ್ಕು ತಪ್ಪಿಸಬಾರದು
ದಾವಣಗೆರೆ, ಜು.5- ನಗರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ ಮಾಡಿಸುವ ಸಲುವಾಗಿ ಸರ್ವ ಪಕ್ಷಗಳ ನಿಯೋಗದ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾ ಯಿಸುವುದು ಸೂಕ್ತ ಮಾರ್ಗ ಎಂದು ಜೆಡಿಎಸ್ ಮುಖಂಡ ಕೆ.ಬಿ. ಕಲ್ಲೇರುದ್ರೇಶ್ ಮನವಿ ಮಾಡಿದರು.
ಇಂದಿಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದಾವಣಗೆರೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ ಎಂದು ಹೇಳುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯಬಾರದು. ಇನ್ನೂ ಸರ್ಕಾರದಿಂದ ಅಧಿಕೃತ ಆದೇಶ ಹೊರಬಂದಿಲ್ಲ. ದಾಖಲೆ ಇದ್ದರೆ ಸ್ಪಷ್ಟಪಡಿಸಲಿ, ನಾವು ಸಂತೋಷ ಪಡುತ್ತೇವೆ ಎಂದರು. ಮುಂಬರುವ ಬಜೆಟ್ ನಲ್ಲಿ ಮಂಜೂರಾತಿ ಪ್ರಸ್ತಾಪ ಮಾಡಿ, ಆದೇಶ ಹೊರಡಿಸಲಿ ಎಂದು ಆಗ್ರಹಿಸಿದರು.
ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಎಲ್ಲಾ ಅರ್ಹತೆ ಹೊಂದಿದೆ. ರಾಜಕೀಯ ಇಚ್ಛಾಶಕ್ತಿ ಬೇಕು. ಯಾವುದೇ ಪಕ್ಷದವರಿರಲಿ ಅವರ ನಾಯಕರನ್ನು ಮೆಚ್ಚಿಸುವುದಕ್ಕಾಗಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ಸಿಎಂ ಬಳಿ ನಿಯೋಗ ಹೋಗಲು ಜಿಲ್ಲಾ ಸಚಿವರಾಗಲೀ ಅಥವಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ನವರಾಗಲೀ ಮುಂದಾಳತ್ವ ವಹಿಸಿಕೊಳ್ಳಲಿ. ಜಿಲ್ಲೆಯ ಎಲ್ಲಾ ವಿಧಾನ ಪರಿಷತ್ ಸದಸ್ಯರು ಪ್ರೋತ್ಸಾಹ ನೀಡಲಿ ಎಂದರು.
ಅದೇ ರೀತಿ ಬಡವರು, ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಕಾರ್ಮಿಕ ಇಲಾಖೆ ವತಿಯಿಂದ ಕೇಂದ್ರ ಸರ್ಕಾರ ನಗರಕ್ಕೆ ಕಾರ್ಮಿಕ ಇಲಾಖೆಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಮಂಜೂರು ಮಾಡಲಿ. ಇದರ ಮುಂದಾಳತ್ವವನ್ನು ಸಂಸದ ಜಿ.ಎಂ.ಸಿದ್ದೇಶ್ವರ ವಹಿಸಿಕೊಳ್ಳಲಿ ಎಂದು ಮನವಿ ಮಾಡಿದರು.
ಯಾರಾದರು ಪುಣ್ಯಾತ್ಮ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ಮೆಡಿಕಲ್ ಕಾಲೇಜು ಮಂಜೂರಾತಿ ಮಾಡಿಸಿದರೆ, ಅಂತಹ ವ್ಯಕ್ತಿಯನ್ನು ಗಾಂಧಿ ಸರ್ಕಲ್ ನಿಂದ ಇಎಸ್ ಐ ಆಸ್ಪತ್ರೆವರೆಗೆ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುತ್ತೇನೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಟ್ನಳ್ಳಿ ಜಬೀವುಲ್ಲಾ ಇದ್ದರು.