2ಎ ಮೀಸಲಾತಿ ದುರ್ಬಳಕೆ ತಡೆಗೆ ಅಹಿಂದ ಒಕ್ಕೂಟ ಒತ್ತಾಯ

ದಾವಣಗೆರೆ, ಫೆ.11- ಜಿಲ್ಲೆಯ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ಲಿಂಗಾಯತ ಒಳಪಂಗಡಗಳ ಹೆಸರಿನಲ್ಲಿ ಕುರುಬರಿಗೆ ಸಿಗಬೇಕಾದ 2ಎ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಜಿಲ್ಲಾಡಳಿತ ಇದನ್ನು ತಡೆಯುವಂತೆ ಅಹಿಂದ ಒಕ್ಕೂಟದ ಜಿಲ್ಲಾಧ್ಯಕ್ಷ ಕೆಂಗೋ ಹನುಮಂತಪ್ಪ ಸುದ್ಧಿಗೋಷ್ಠಿಯ ಮೂಲಕ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈಗಾಗಲೇ ಚನ್ನಗಿರಿ ತಾಲ್ಲೂಕಿನ ದೊಡ್ಡಮಲ್ಲಾಪುರ ಗ್ರಾ.ಪಂ ನಲ್ಲಿ 2ಎ ಮೀಸಲಾತಿ ದುರ್ಬಳಕೆ ಪಡೆದು ಅಧಿಕಾರಕ್ಕೆ ಬಂದಿರುವುದು ತಿಳಿದುಬಂದಿದೆ. ಕೂಡಲೇ ಅಂತಹ ಪಂಚಾಯ್ತಿ ಮೀಸಲಾತಿ ಹಿಂಪಡೆಯಬೇಕು ಮತ್ತು ಇದಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಲಿಂಗಾಯತ ಕುಂಬಾರ, ಲಿಂಗಾಯತ ಗಾಣಿಗ, ಲಿಂಗಾಯತ ಹಡಪದ ಹೆಸರಿನಲ್ಲಿ 2ಎ ಮೀಸಲಾತಿ ಪಡೆದು ಕುರುಬರನ್ನು ಅಧಿಕಾರದಿಂದ ದೂರ ಇಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

2ಎ ಮೀಸಲಾತಿ ದುರುಪಯೋಗವಾಗದಂತೆ ತಡೆ ಯಲು ರಾಜ್ಯಾದ್ಯಂತ ಎಲ್ಲಾ ಪಂಚಾಯ್ತಿಗಳಿಗೂ ಸುತ್ತೋಲೆ ಹೊರಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಮಾಹಿತಿ ಹಕ್ಕಿನಡಿ ಸುಳ್ಳು ಪ್ರಮಾಣ ಪತ್ರ ನೀಡಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ದಾಖಲೆ ಪಡೆದು ಉನ್ನತಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದರು.

ಲಿಂಗಾಯತ ಸಮುದಾಯದ ಕೆಲ ಉಪ ಪಂಗಡಗಳು 2ಎ ಮೀಸಲಾತಿ ದುರುಪಯೋಗಕ್ಕೆ ಮುಂದಾಗಿದ್ದು, ಹೀಗೆಯೇ ಮುಂದುವರೆದರೆ ಸುಳ್ಳು ಮೀಸಲಾತಿ ಪ್ರಮಾಣಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗ ಳಾದ ಬಳ್ಳಾರಿ ಷಣ್ಮುಖಪ್ಪ, ಜೆ.ಕೆ. ಕೊಟ್ರಬಸಪ್ಪ, ಬಿ.ಹೆಚ್‌. ಪರಶುರಾಮಪ್ಪ, ಪಿ. ರಾಜಕುಮಾರ್‌, ಹೆಚ್‌.ಬಿ. ಗೋಣೆಪ್ಪ, ಲಿಂಗರಾಜ್, ಹಾಲೇಕಲ್‌ ಎಸ್‌.ಟಿ. ಅರವಿಂದ್‌, ಹೆಚ್‌.ಎಂ. ಜಯಣ್ಣ, ಚೌಡಪ್ಪ, ಜಯಣ್ಣ, ಷಣ್ಮುಖ ಆಚಾರ್‌, ಉಮೇಶ್‌, ಮುದಹದಡಿ ದಿಳ್ಳೆಪ್ಪ, ಶ್ರೀನಿವಾಸ್‌, ಇಟ್ಟಿಗುಡಿ ಮಂಜುನಾಥ್‌, ದ್ಯಾಮಣ್ಣ, ಮೌನೇಶ್ವರಾಚಾರ್, ಮಹಾರುದ್ರಚಾರ್‌ ಉಪಸ್ಥಿತರಿದ್ದರು.

error: Content is protected !!