ಹಣ ವಸೂಲಿ ತಪ್ಪಿಸಿ ಸುಗಮ ಸರಕು ಸಾಗಾಣಿಕೆಗೆ ಅವಕಾಶ ನೀಡಲು ಮನವಿ

ದಾವಣಗೆರೆ, ಏ.14- ಪೂರ್ವ ವಲಯ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗಳ ಪೊಲೀಸರಿಂದ ಸರಕು-ಸಾಗಣೆ ವಾಹನಗಳಿಂದ ಹಣ ವಸೂಲಿ ಮಾಡುತ್ತಿರು ವುದನ್ನು ತಪ್ಪಿಸುವಂತೆ ಕರ್ನಾಟಕ ಲಾರಿ ಮಾಲೀಕರ ಮತ್ತು ಟ್ರ್ಯಾನ್ಸ್ ಪೋರ್ಟ್ ಏಜೆಂಟರ ಸಂಘವು ಪೂರ್ವ ವಲಯ ಐಜಿಪಿ ಅವರಿಗೆ ಮನವಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಸಾರಿಗೆ ಉದ್ಯಮ ನಡೆಸುವುದೇ ಕಷ್ಟವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಹಿರಿಯೂರಿನ ಬಳ್ಳಾರಿ ರಸ್ತೆಯಲ್ಲಿ ರಾತ್ರಿಯ ಗಸ್ತಿನಲ್ಲಿರುವ ಪೊಲೀಸರು ದ್ವಿಚಕ್ರ ವಾಹನದಲ್ಲಿ ಬಂದು ಸರಕು ಸಾಗಣೆ ವಾಹನಗಳನ್ನು ತಡೆದು ಚಾಲಕರಿಗೆ ಕಿರುಕುಳ ನೀಡುತ್ತಿರುವುದು ಹೆಚ್ಚಾಗಿದೆ. ದಾವಣಗೆರೆ, ಕುಮಾರಪಟ್ಟಣಂ, ಹಾವೇರಿ, ರಾಣೇಬೆನ್ನೂರು, ಬಂಕಾಪುರ ಠಾಣೆಗಳ ಪೊಲೀಸ್ ಪೇದೆಗಳು ದಿನ ನಿತ್ಯ ಸರಕು ಸಾಗಣೆ ವಾಹನ ಚಾಲಕರಿಗೆ ತೊಂದರೆ ಕೊಡುತ್ತಿರುವುದು ಸಾಮಾನ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಆರೋಪಿಸಿದ್ದಾರೆ.

ಈಗಿನ ಐಎಂವಿ ಕೇಸ್ ಮತ್ತು ದಂಡಗಳು ಅತಿ ಹೆಚ್ಚಾಗಿದ್ದು, ಅದರ ನೆಪ ಒಡ್ಡಿ ಲಾರಿ ಚಾಲಕರಿಂದ 200, 300 ರೂ. ಹಣ ವಸೂಲಿ ಮಾಡುತ್ತಿದ್ದಾರೆ. ಯಾವತ್ತೂ ಕಾಣಲಾರದ ಪೊಲೀಸ್‍ ಪೇದೆಗಳು ಕೊಡುತ್ತಿರುವ ಕಿರುಕುಳದ ಬಗ್ಗೆ ಗಮನ ಹರಿಸಿ ಇದಕ್ಕೆ ಕಡಿವಾಣ ಹಾಕಬೇಕು. ಈ ನಮ್ಮ ಮನವಿಗೆ ಸ್ಪಂದಿಸಿ ನಮಗೆ ನ್ಯಾಯ ಒದಗಿಸಿ ಕೊಡುವುದರ ಮೂಲಕ ಸುಗಮ ಸರಕು ಸಾಗಾಣಿಕೆಗೆ ಒತ್ತು ಕೊಡುವಂತೆ ಕೋರಿದ್ದಾರೆ.

error: Content is protected !!