ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಗೆ ಒತ್ತಾಯ

ಜಿಲ್ಲಾ ಕಿಸಾನ್ ಕಾಂಗ್ರೆಸ್ ನಿಂದ ಪ್ರಧಾನಿ ಮೋದಿಗೆ ರಕ್ತ ಪತ್ರ

ದಾವಣಗೆರೆ, ಫೆ.10- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ  ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಬೆಂಬಲಿಸಿ ಜಿಲ್ಲಾಧ್ಯಕ್ಷ ಬಸವರಾಜು ವಿ. ಶಿವಗಂಗಾ ನೇತೃತ್ವದಲ್ಲಿ ರಕ್ತಪತ್ರ ಚಳುವಳಿ ನಡೆಸಿ, ಪ್ರಧಾನ ಮಂತ್ರಿಗಳಿಗೆ ರಕ್ತ ಪತ್ರವನ್ನು ಕಳುಹಿಸಲಾಯಿತು.

ನಗರದ ಮಂಡಿಪೇಟೆಯ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಬಸವರಾಜು ವಿ. ಶಿವಗಂಗಾ ಮತ್ತು ಕಾರ್ಯಕರ್ತರು, ಭೂ ಸುಧಾರಣೆ, ಎಪಿಎಂಸಿ ಹಾಗೂ ವಿದ್ಯುತ್ ಕಾಯ್ದೆಗಳ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ರಕ್ತ ಪತ್ರ ಕಳುಹಿಸಿ ಒತ್ತಾಯಿಸಿದರು. ಬಳಿಕ ಜಿಲ್ಲಾ ಪಂಚಾಯ್ತಿ ಕಚೇರಿ ಮುಂಭಾಗ ಹೆದ್ದಾರಿ ತಡೆದು ಕೇಂದ್ರ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಿದರು.

ಬಸವರಾಜು ವಿ. ಶಿವಗಂಗಾ ಮಾತನಾಡಿ, ಕಳೆದ 70 ದಿನಗಳಿಂದ ದೆಹಲಿಯಲ್ಲಿ ರೈತರು ಹೋ ರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕಿವಿ ಕೇಳದಂತೆ ಕೂತಿದೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದಲೂ ರೈತರ ವಿರೋಧಿ ಯಾಗಿ ಕೆಲಸ ಮಾಡುತ್ತಿದ್ದು, ಅನ್ನದಾತರು ನಿರಂತರ ವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಪ್ರಧಾನಿಗಳು ನೇರವಾಗಿ ಮಾತುಕತೆಗೆ ಮುಂದಾಗಿಲ್ಲ. ಬೀದಿ ಯಲ್ಲಿ ಹೋರಾಟ ಮಾಡುತ್ತಿರುವ ರೈತರ ಮೇಲೆ ಪೊಲೀಸರನ್ನು ಬಿಟ್ಟು ಹತ್ತಿಕ್ಕುವ ಕೆಲಸ ಮಾಡಲಾ ಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸುಪ್ರೀಂ ಕೋರ್ಟ್ ಈ ಕಾಯ್ದೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಆದರೂ ನರೇಂದ್ರ  ಮೋದಿಯವರು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದೇ ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ಬೆಂಬಲಿಸಿ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಪ್ರಧಾನಿಯವರಿಗೆ ಕಳುಹಿಸಲಾಗಿದೆ. ನಮ್ಮ ಹೋರಾಟ ಸರ್ಕಾರ ತೊಲಗಬೇಕು ಇಲ್ಲವೇ, ರೈತ ವಿರೋಧಿ 3 ಕಾಯ್ದೆಗಳನ್ನು ಹಿಂಪಡೆಯಬೇಕು. ಕಾಯ್ದೆಗಳನ್ನ ಹಿಂಪಡೆಯುವ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚಳುವಳಿಯಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪ್ರವೀಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಜಿ.ಆರ್. ಮಾಲತೇಶ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ, ಮಾಯಕೊಂಡ ಬ್ಲಾಕ್ ಅಧ್ಯಕ್ಷ ಹಾಲೇಶ್ ಬಸನಾಳ್, ದಾವಣಗೆರೆ ದಕ್ಷಿಣ ಅಧ್ಯಕ್ಷ ಜಿ. ಅಜ್ಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!