ದಾವಣಗೆರೆ, ಜು.4- ನಗರದ ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿನ ಸಮಾಧಿಗಳನ್ನು ಏಕಾಏಕಿ ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದಿಂದ ನೆಲಸಮ ಮಾಡಲಾಗಿದ್ದು, ತಕ್ಷಣವೇ ಆ ಸಮಾಧಿಗಳ ಪುನರ್ ನಿರ್ಮಾಣ ಮಾಡಬೇಕು ಎಂದು ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಆಗ್ರಹಿಸಿದ್ದಾರೆ.
ಕಳೆದ 30-40 ವರ್ಷಗಳಿಂದ ಇದ್ದ 10-12 ಸಮಾಧಿಗಳನ್ನು ನೆಲಸಮಗೊಳಿದ್ದಾರೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡಲಿಲ್ಲ. ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡುವ ಜಾಗದಲ್ಲಿ ನೀರು ನಿಲ್ಲುತ್ತಿತ್ತು. ಹೀಗಾಗಿ, ರಸ್ತೆ ನಿರ್ಮಾಣಕ್ಕಾಗಿ ಅವುಗಳನ್ನು ತೆರವುಗೊಳಿ ಸಿರುವುದಾಗಿ ದೂಡಾ ಆಯುಕ್ತರು ಹೇಳುತ್ತಿದ್ದಾರೆ. ರುದ್ರಭೂಮಿಯಲ್ಲಿ ಸಮಾಧಿಗಳಿಗೆ ಹಾನಿಯಾಗ ದಂತೆ ರಸ್ತೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ತಲೆತಲಾಂತರದಿಂದ ಮೃತರ ಕುಟುಂಬಸ್ಥರು ಪೂಜೆ ಸಲ್ಲಿಸುತ್ತಾ ಬರುತ್ತಿದ್ದ ಸಮಾಧಿಗಳನ್ನು ನೆಲಸಮಗೊಳಿಸಿರುವುದು ಸರಿಯಲ್ಲ ಎಂದು ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಪ್ಪ ಜೋಗಿ, ತುಕಾರಾಂ, ಸುರೇಶ್, ಬಿ.ಎಚ್.ಉದಯಕುಮಾರ್, ವಿನಾಯಕ ಪೈಲ್ವಾನ್, ಮಲ್ಲಿಕಾರ್ಜುನ ಇಂಗಳೇಶ್ವರ ಇದ್ದರು.