ಜಗಳೂರು, ಏ.11- ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆದಿದ್ದಾರೆ. ಅವರಿಗೆ ಉತ್ತಮ ಬೆಲೆ ಸಿಗುವ ಉದ್ದೇಶದಿಂದ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ಮನವಿ ಮಾಡಿದರು. ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ವಿಂಟಾಲ್ಗೆ 5,400 ರೂ. ದರದಲ್ಲಿ ಖರೀದಿಸಲಾಗುವುದು.ಇದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ. ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ರೈತರು ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಅಧಿಕಾರಿಗಳು ಮಧ್ಯವರ್ತಿಗಳು ಬಾರದಂತೆ ಗಮನಹರಿಸಬೇಕು. ರೈತರಿಗೆ ತೊಂದರೆಯಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ತಹಶೀಲ್ದಾರ್ ಡಾ. ನಾಗವೇಣಿ, ಸಮಿತಿ ಸದಸ್ಯರು, ರೈತರು ಉಪಸ್ಥಿತರಿದ್ದರು.