ದಾವಣಗೆರೆ ಅರ್ಬನ್ ಬ್ಯಾಂಕಿಗೆ 9.19 ಕೋಟಿ ರೂ. ಲಾಭ

ದಾವಣಗೆರೆ ಅರ್ಬನ್ ಬ್ಯಾಂಕಿಗೆ 9.19 ಕೋಟಿ ರೂ. ಲಾಭ - Janathavaniದಾವಣಗೆರೆ,ಏ.11- ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದು ಎಂಬ ಹೆಗ್ಗಳಿಕೆಯೊಂದಿಗೆ ಮುನ್ನಡೆದಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, 2021, ಮಾರ್ಚ್ ಅಂತ್ಯಕ್ಕೆ 9.19 ಕೋಟಿ ರೂ. ಲಾಭ ಗಳಿಸಿರುವ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕಿನ ಒಟ್ಟು ಲಾಭದಲ್ಲಿ ಆದಾಯ ತೆರಿಗೆ ಮತ್ತು ಇತರೆ ನಿಧಿಗಳಿಗೆ ಅವಕಾಶ ಕಲ್ಪಿಸಿದ ನಂತರ 5.06 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

15,419 ಸದಸ್ಯರನ್ನು ಹೊಂದಿರುವ ಈ ಬ್ಯಾಂಕ್, 12 ಕೋಟಿ ರೂ. ಷೇರು ಬಂಡವಾಳದೊಂದಿಗೆ ಮುನ್ನಡೆದಿದೆ. 53 ಕೋಟಿ ರೂ. ನಿಧಿ ಮತ್ತು 512 ಕೋಟಿ ರೂ. ದುಡಿಯುವ ಬಂಡವಾಳವಾಗಿದ್ದು, 435 ಕೋಟಿ ರೂ. ಠೇವಣಿ ಹೊಂದಿದೆ. ಸದಸ್ಯರ ವಿವಿಧ ಉದ್ದೇಶಗಳಿಗನುಗುಣವಾಗಿ 269 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ. 210 ಕೋಟಿ ರೂ. ತೊಡಗಣಿಯಾಗಿದ್ದು, ಶೇ. 3.69 ಕೋಟಿ ರೂ. ಎನ್.ಪಿ.ಎ. ಆಗಿರುತ್ತದೆ ಎಂದು ಬ್ಯಾಂಕಿನ ಆರ್ಥಿಕ ಪಕ್ಷಿ ನೋಟವನ್ನು ಸಂಕ್ಷಿಪ್ತ ಅಂಕಿ-ಅಂಶಗಳೊಂದಿಗೆ ಅವರು ಚಿತ್ರಿಸಿದರು.

ಕೋವಿಡ್ ರಿಯಾಯಿತಿ : ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ – 19 ಸಂದರ್ಭದಲ್ಲಿ ಸುದೀರ್ಘ ಕಾಲ ಆದ ಲಾಕ್ ಡೌನ್ ಪರಿಣಾಮದಿಂದ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಇದರಿಂದ ವರ್ತಕರ ವ್ಯವಹಾರದ ಸ್ಥಿತಿ ಗಂಭೀರವಾಗಿತ್ತು. ಕಾರಣ, ಸಾಲಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಅವರನ್ನು ತಮ್ಮ ಬ್ಯಾಂಕಿನಿಂದ ಪ್ರೋತ್ಸಾಹಿಸುವ ಸದುದ್ದೇಶದಿಂದ 6 ತಿಂಗಳುಗಳ ಕಾಲ ಬಡ್ಡಿಯಲ್ಲಿ ಶೇ. 1 ರಂತೆ ವಿಶೇಷ ರಿಯಾಯಿತಿ ನೀಡಲಾಗಿತ್ತು. ಇದರಿಂದ ಬ್ಯಾಂಕಿಗೆ ಲಾಭದಲ್ಲಿ ಸುಮಾರು 90 ಲಕ್ಷ ರೂ.ಗಳಿಗೂ ಹೆಚ್ಚು ಕಡಿಮೆಯಾಯಿತಾದರೂ ಸಂದಿಗ್ಘ ಪರಿಸ್ಥಿತಿಯಲ್ಲಿ ಸಾಲಗಾರರನ್ನು ಕೈ ಹಿಡಿದ ಪ್ರಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಕಾರಣವಾಗಿದೆ ಎಂದು ಕೋಗುಂಡಿ ಬಕ್ಕೇಶಪ್ಪ ಹರ್ಷ ವ್ಯಕ್ತಪಡಿಸಿದರು.

ತಮ್ಮ ಬ್ಯಾಂಕ್‌ ನೀಡಿದ ಬಡ್ಡಿಯಲ್ಲಿ ಶೇ. 1ರಷ್ಟು ವಿಶೇಷ ರಿಯಾಯಿತಿಯನ್ನು ವ್ಯವಹಾರಸ್ಥರು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ, ಬ್ಯಾಂಕಿನ ನಿಗದಿತ ಅವಧಿಯಲ್ಲಿ ಸಾಲವನ್ನು ಮರುಪಾವತಿಸುವುದರ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಕೋವಿಡ್‌ ಸಮಯದಲ್ಲೂ ತಮ್ಮ ಬ್ಯಾಂಕ್‌ ಈ ಹಿಂದಿನ ಸಾಲುಗಳಿಗಿಂತಲೂ ಹೆಚ್ಚು ಪ್ರಗತಿ ಸಾಧಿಸಿದ್ದು, ಇದು ಬ್ಯಾಂಕಿನ ಸಾರ್ವಜನಿಕರು ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. 

ಕೃತಜ್ಞತೆ : ಸರ್ವತೋಮುಖ ಅಭಿವೃದ್ಧಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಬ್ಯಾಂಕ್ ಪ್ರಗತಿದಾಯಕವಾಗಿ ಮುನ್ನಡೆಯಲು ಬ್ಯಾಂಕಿನ ಸದಸ್ಯರು ಮತ್ತು ಠೇವಣಿದಾರರ ಪ್ರೋತ್ಸಾಹ ಹಾಗೂ ಸಹಕಾರ, ಸಿಬ್ಬಂದಿ ವರ್ಗದವರ ಪರಿಶ್ರಮ, ಆಡಳಿತ ಮಂಡಳಿಯ ಇಚ್ಛಾಶಕ್ತಿ ಕಾರಣವಾಗಿದೆ ಎಂದು ತಿಳಿಸಿದ ಬ್ಯಾಂಕಿನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ, ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುತ್ತಿರುವ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಜವಾಬ್ದಾರಿ ನಿರ್ವಹಿಸಿದ ಬ್ಯಾಂಕ್ : ಸದಸ್ಯರ ಅಗತ್ಯಗನುಣವಾಗಿ ಆರ್ಥಿಕ ಸಹಾಯವನ್ನು  ನೀಡುವುದರೊಂದಿಗೆ ಸಾರ್ವಜನಿಕರ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಬ್ಯಾಂಕಿನ ಪಾತ್ರ ಅತೀ ಮುಖ್ಯವಾಗಿರುತ್ತದೆ ಎಂದು ಪ್ರತಿಪಾದಿಸಿದ ಹಿರಿಯ ನಿರ್ದೇಶಕ ಬಿ.ಸಿ. ಉಮಾಪತಿ, ಈ ಬ್ಯಾಂಕನ್ನು ಸ್ಥಾಪಿಸಿದ ಮಹನೀಯರ ಆಶೋತ್ತರಗಳಿಗನುಗುಣವಾಗಿ  ಬ್ಯಾಂಕ್ ಆಲದ ಮರದಂತಾಗಿ ಬೆಳೆಯಲು ಬ್ಯಾಂಕಿನ ಸದಸ್ಯರು ಮತ್ತು ಗ್ರಾಹಕರ ಸಹಕಾರ, ಪ್ರೋತ್ಸಾಹ ಕಾರಣ ಎಂದು ಹೇಳಿ, ಕೃತಜ್ಞತೆ ಸಲ್ಲಿಸಿದರು.

ಬ್ಯಾಂಕಿನ ನಿರ್ದೇಶಕರುಗಳಾದ ಮತ್ತಿಹಳ್ಳಿ ವೀರಣ್ಣ, ಪಲ್ಲಾಗಟ್ಟಿ ಶಿವಾನಂದಪ್ಪ, ಎಂ. ಚಂದ್ರಶೇಖರ್, ಟಿ.ಎಸ್. ಜಯರುದ್ರೇಶ್, ದೇವರಮನೆ ಶಿವಕುಮಾರ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಕಂಚಿಕೆರೆ ಮಹೇಶ್, ನಲ್ಲೂರು ಎಸ್. ರಾಘವೇಂದ್ರ, ಇ.ಎಂ. ಮಂಜುನಾಥ, ವಿ. ವಿಕ್ರಮ್, ವೃತ್ತಿಪರ ನಿರ್ದೇಶಕರುಗಳಾದ ಮುಂಡಾಸ್ ವೀರೇಂದ್ರ, ಮಲ್ಲಿಕಾರ್ಜುನ ಕಣವಿ, ವಿಶೇಷ ಆಹ್ವಾನಿತರುಗಳಾದ ಬೆಳ್ಳೂಡಿ ಮಂಜುನಾಥ್, ಎಂ. ದೊಡ್ಡಪ್ಪ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಡಿ.ವಿ.ಆರಾಧ್ಯಮಠ್ ಸ್ವಾಗತಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್ ವಂದಿಸಿದರು.

error: Content is protected !!