ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರ್‍ಗೌಡ ಅಭಿಮತ
ದಾವಣಗೆರೆ, ಏ.9- ನಮ್ಮ ಜೀವನದಲ್ಲಿ ಉತ್ತಮ ಆಹಾರ ಪದ್ದತಿ ಅಳವಡಿಸಿ ಕೊಳ್ಳುವ ಜೊತೆಗೆ ಯೋಗ ಕಡ್ಡಾಯ ಗೊಳಿಸಿಕೊಂಡರೆ ಯಾವುದೇ ರೋಗಗಳು ಎದುರಾಗುವುದಿಲ್ಲ. ಇಂದಿನ ಆಹಾರ ಪದ್ದತಿಯಿಂದಾಗಿ ನಮಗೆ ರೋಗಗಳು ಹೆಚ್ಚೆಚ್ಚು ಬರುತ್ತಿದ್ದು ಇದಕ್ಕಾಗಿ ಯೋಗವನ್ನು ಮೈಗೂಡಿಸಿಕೊಳ್ಳುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರ್‍ಗೌಡ ಕರೆ ನೀಡಿದರು.
ಅವರು, ಇಂದು ನಗರದ ಎಂಸಿಸಿ ಬಿ ಬ್ಲಾಕ್‍ನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಿತಿ ಯೋಗ ಫೆಡರೇಷನ್ ವತಿಯಿಂದ ಆಯೋಜಿಸಲಾಗಿದ್ದ ಯೋಗ ಕಲಾನಿಧಿ ಪ್ರಶಸ್ತಿ ವಿಜೇತರಿಗೆ ಗೌರವಿಸಿ ಸನ್ಮಾನಿಸುವ ಈ ಕಾರ್ಯಕ್ರಮವನ್ನು ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿನ ಆಹಾರ ಪದ್ದತಿ ಕೆಟ್ಟು ಹೋಗಿರುವ ಕಾರಣ ನಾವೆಲ್ಲಾ ಅನೇಕ ಕಾಯಿಲೆಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಯೋಗದಿಂದ ನಾವೆಲ್ಲರೂ ಒಗ್ಗೂಡುತ್ತೇವೆ. ಇಲ್ಲಿ ಯಾವುದೇ ಜಾತಿ, ಮತ, ಪಂಥ,ಧರ್ಮಕ್ಕೆ ಅವಕಾಶ ಇಲ್ಲ. ಯೋಗ ಪ್ರತಿಯೊಬ್ಬರನ್ನೂ ಆರೋಗ್ಯವಂತರನ್ನಾಗಿ ಮಾಡುತ್ತದೆ. ಕಾರಣ ನಾವೆಲ್ಲರೂ ಕಡ್ಡಾಯವಾಗಿ ಯೋಗ ಕಲಿಯುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗೋಣ ಎಂದರು.
ಯೋಗದಿಂದ ಕೇವಲ ಮಾನಸಿಕ ಒತ್ತಡ ಮಾತ್ರವಲ್ಲದೆ ನಮ್ಮಲ್ಲಿನ ಆತಂಕ ದೂರ ಆಗುತ್ತದೆ. ನಿರಂತರ ಯೋಗ ಮಾಡುವ ಮೂಲಕ ಮನಸ್ಸನ್ನು ಸದೃಢವಾಗಿಟ್ಟುಕೊಂಡು ಸದಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗುವಂತೆ ಕಿವಿ ಮಾತು ಹೇಳಿದ ಅವರು, ಕಡ್ಡಾಯವಾಗಿ ಎಲ್ಲರೂ ಕೊರೊನಾ ವಿರುದ್ಧದ ಲಸಿಕೆಯನ್ನು ಯಾವುದೇ ಆತಂಕ ಇಲ್ಲದೇ ಪಡೆಯಬೇಕೆಂದು ಹೇಳಿದರು.
ನೀವುಗಳು ಎಲ್ಲೋ ಕುಳಿತು ಕೆಲಸ ಮಾಡಿ ಒತ್ತಡಕ್ಕೆ ಒಳಗಾಗಿದ್ದರೆ ಅಲ್ಲಿಯೇ ಕುಳಿತು ಕೇವಲ 10 ನಿಮಿಷ ಯೋಗ ಮುದ್ರೆಯಲ್ಲಿ ಧ್ಯಾನ ಮಾಡಿದರೆ ನಿಮ್ಮಲ್ಲಿನ ಒತ್ತಡ ದೂರವಾಗಿ ಮನಸ್ಸು ಶಾಂತವಾಗುತ್ತದೆ. ಈ ಮುದ್ರೆ 2 ಗಂಟೆಗಳ ನಿದ್ರೆಗೆ ಸಮ. ಇದರ ಜೊತೆಯಲ್ಲಿ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿಕೊಂಡರೆ ಒಳಿತು. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮದಲ್ಲಿ ಯೋಗ ತರಬೇತಿ ಕೇಂದ್ರ ಆರಂಭಿಸಲಾಗುವುದು. ಆ ಕಾಲ ದೂರವಿಲ್ಲ ಎಂದರು.
ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ್ ರಾಯ್ಕರ್ ಮಾತನಾಡಿ, ಜೀವನದಲ್ಲಿ ಭಕ್ತಿ ಮತ್ತು ಯೋಗ ಇವೆರಡೂ ಜೋಡಿ ಎತ್ತುಗಳಿದ್ದಂತೆ. ಇವು ಇದ್ದರೆ ಮನಸ್ಸು ಶಾಂತಿ, ನೆಮ್ಮದಿ ಮಾತ್ರವಲ್ಲದೆ ಶಿಸ್ತು ಕೂಡ ಬರುತ್ತದೆ. ಆದರೆ ಇಂದು ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮತನ ಕಳೆದುಕೊಂಡು ರೋಗಿಗಳಾಗುತ್ತಿದ್ದೇವೆ. ಕಾರಣ ಇನ್ನಾದರೂ ಭಕ್ತಿ ಮತ್ತು ಯೋಗ ಮೈಗೂಡಿಸಿಕೊಂಡು ಉತ್ತಮ ಆರೋಗ್ಯ ಪಡೆಯೋಣ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೆಡರೇಷನ್ ಅಧ್ಯಕ್ಷ ಎಂ.ರುದ್ರಪ್ಪ ವಹಿಸಿದ್ದರು. ವನಿತಾ ಯೋಗ ಕೇಂದ್ರದ ಅಧ್ಯಕ್ಷ ಪ್ರಕಾಶ ಉತ್ತಂಗಿ, ಪೊಲೀಸ್ ಅಧಿಕಾರಿ ಆರ್.ರುದ್ರಪ್ಪ, ಯೋಗ ಗುರು ಪರಶುರಾಮ, ಎಂ.ಎನ್.ಗೋಪಾಲರಾವ್, ರಾಘವೇಂದ್ರ ಚೌವಾಣ್, ಅಜೇಯ, ಎಂ.ವೈ. ಸತೀಶ್, ಜಿ.ಎಸ್. ವೀರೇಶ್, ನಾಗರಾಜ್, ನವೀನ, ರಾಜು, ಜಗದೀಶ್ ಆಚಾರ್, ವಿಜಯಲಕ್ಷ್ಮಿ ಇತರರು ಇದ್ದರು. ಇದೇ ವೇಳೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಯೋಗ ಕಾರ್ಯಕ್ರಮದಲ್ಲಿ ವಿಜೇತರಾದ ಸಾಧಕರನ್ನು ಸನ್ಮಾನಿಸಲಾಯಿತು.