ಚಿರತೆ ಬಂಧಿಸಲು ಜಂಟಿ ಕಾರ್ಯಾಚರಣೆ

ಹರಿಹರ, ಜು.2-  ತಾಲ್ಲೂಕಿನ ಚಿಕ್ಕಬಿದಿರೆ ಮತ್ತು ಸಾರಥಿ ಸುತ್ತಮುತ್ತಲಿನ ಗ್ರಾಮದ ಅಡಿಕೆ ತೋಟವೊಂದರಲ್ಲಿ ಬೀಡು ಬಿಟ್ಟಿದ್ದ ಕುರಿಗಾಹಿಗಳ ಕುರಿ ಹಿಂಡಿನ ಮೇಲೆ ಕಳೆದೆರಡು ದಿನಗಳ ಹಿಂದೆ ಚಿರತೆ ದಾಳಿ ನಡೆಸಿ ಕುರಿಯೊಂದನ್ನು ಕೊಂದು ಹಾಕಿದೆ. 

ಚಿರತೆ ದಾಳಿಯಿಂದ ಚಿಕ್ಕಬಿದರಿ, ಸಾರಥಿ ಸೇರಿದಂತೆ ಸುತ್ತಮುತ್ತಲಿನ  ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಚಿರತೆ ಬಂಧನಕ್ಕೆ ಪೊಲೀಸ್‍ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಗ್ರಾಮಕ್ಕೆ ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ಭೇಟಿ ನೀಡಿದ್ದ ವೇಳೆ ಮಾತನಾಡಿ, ಕುರಿಗಳ ಮೇಲೆ ದಾಳಿ ನಡೆಸಿರುವುದು ಚಿರತೆ ಎಂದು ಕಳೇಬರಹದ ಮೇಲಿನ ಹಲ್ಲಿನ ಗುರುತು ಹಾಗೂ ಪಾದಗಳ ಗುರುತುಗಳಿಂದ ಧೃಡಪಟ್ಟಿದೆ. ಸುರಕ್ಷತಾ ಕ್ರಮವಾಗಿ ಚಿರತೆ ಬಂಧನಕ್ಕೆ ಬೋನನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗುತ್ತೂರು ಗ್ರಾಮಾಂತರ ಠಾಣೆ ಪಿಎಸ್‍ಐ ಡಿ. ರವಿಕುಮಾರ್ ಮಾತನಾಡಿ, ಚಿಕ್ಕಬಿದಿರೆ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಟಾಂ ಟಾಂ ಹೊಡೆಸಲಾಗಿದೆ. ಸುರಕ್ಷತೆಯ ಹಿನ್ನೆಲೆಯಲ್ಲಿ ಹಗಲು ಮತ್ತು ರಾತ್ರಿ ಬಂದೋಬಸ್ತ್ ಗಾಗಿ ಸಿಬ್ಬಂದಿ ನೇಮಿಸಲಾಗಿದೆ ಎಂದು ತಿಳಿಸಿದರು.

ಸಾರಥಿ ಪಿಡಿಓ ರಾಘವೇಂದ್ರ ಮಾತನಾಡಿ ಸಾರಥಿ, ಚಿಕ್ಕಬಿದರಿ ಸೇರಿದಂತೆ ಸುಮಾರು 1,000 ಎಕರೆ ಪ್ರದೇಶವು ಗುಡ್ಡಗಾಡಿನಿಂದ ಕೂಡಿದೆ. ಗುಡ್ಡಗಾಡು ಪ್ರದೇಶದಲ್ಲಿ ಸಾರ್ವಜನಿಕರು ಮತ್ತು ಕುರಿಗಾಹಿಗಳು ತೆರಳದಂತೆ ತಿಳಿಸಲಾಗಿದೆ. ದುಗ್ಗತ್ತಿ ಸಕ್ಕರೆ ಕಾರ್ಖಾನೆಯ ಹಿಂಬದಿಯ ರಸ್ತೆಯಲ್ಲಿ ಕಾಣಿಸಿ ಕೊಂಡಿತ್ತು ಎಂದು ಗ್ರಾಮಸ್ಥರು ಹೇಳಿದ್ದರಿಂದ  ಆ ಸ್ಥಳದಲ್ಲಿಯೂ  ಓಡಾಡದಂತೆ ತಿಳಿಸಲಾಗಿದೆ. ಹರಪನ ಹಳ್ಳಿ ಭಾಗದಲ್ಲಿ ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ, ಆ ಭಾಗದಿಂದ ಬಂದಿರಬಹುದು ಎಂದು ಊಹಿಸ ಲಾಗಿದ್ದು, 2-3 ದಿನಗಳಲ್ಲಿ ಚಿರತೆಯನ್ನು  ಸೆರೆಹಿಡಿದು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಾಚರಣೆಯಲ್ಲಿ ಪೊಲೀಸ್‍ ಸಿಬ್ಬಂದಿ ಕರಿಯಪ್ಪ, ಕೃಷ್ಣ, ಅರಣ್ಯ ರಕ್ಷಕ ವೆಂಕಟೇಶ್‍, ಅರಣ್ಯ ವೀಕ್ಷಕರಾದ ಸುರೇಶ್‍, ಬಸವರಾಜ್‍ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!