ದಾವಣಗೆರೆ, ಫೆ.4- ಕುರುಬ ಜಾತಿಯನ್ನು ಎಸ್.ಟಿ. ಮೀಸಲಾತಿ ಪಟ್ಟಿಯೊಳಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ಇದೇ ದಿನಾಂಕ 7ರ ಭಾನುವಾರ ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಸಿಬ್ಯೂಷನ್ ಮೈದಾನದಲ್ಲಿ ಕುರುಬರ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಸಮಾಜದ ಮುಖಂಡ ಬಿ.ಎಂ. ಸತೀಶ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜಕ್ಕಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಜನವರಿ 15 ರಿಂದ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದಾರೆ. ಹಕ್ಕೊ ತ್ತಾಯದ ಮುಂದುವರೆದ ಭಾಗವಾಗಿ ಬೆಂಗಳೂರಿನಲ್ಲಿ ಐತಿಹಾಸಿಕ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಅಂದಿನ ಸಮಾವೇಶಕ್ಕೆ ಹತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ದಾವಣಗೆರೆ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಏಳೆಂಟು ಸಾವಿರ ಜನ ಸೇರಿದಂತೆ ಜಿಲ್ಲೆಯಿಂದ ಸುಮಾರು 50 ಸಾವಿರ ಜನ ಬೆಂಗಳೂರಿಗೆ ತೆರಳಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಲೇಕಲ್ ವೀರಣ್ಣ, ಶಿವಣ್ಣ ಮೇಷ್ಟ್ರು, ಎಸ್.ಎಸ್. ಗಿರೀಶ್, ವಿಜಯ್ ಜೋಗಪ್ಪನವರ್, ಭರಮಪ್ಪ ಪೈಲ್ವಾನ್, ಹೆಚ್.ಎನ್. ಗುರುನಾಥ್, ಪ್ರಸನ್ನ ಕುಮಾರ್, ಚಂದ್ರಶೇಖರ್, ಶಿವಮೂರ್ತಿ, ಪರಶುರಾಮ್, ಧನರಾಜ್ ಹಾಗು ಇತರರು ಉಪಸ್ಥಿತರಿದ್ದರು.