ಸತ್ತವರ ಹೆಸರಿಗೆ ಖಾತ್ರಿ ಹಣ ಜಮಾ : ಕ್ರಮಕ್ಕೆ ಆಗ್ರಹ

ಹೂವಿನಹಡಗಲಿ, ಫೆ.2- ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಮೃತಪಟ್ಟಿರುವ ಕೂಲಿಕಾರರಿಗೆ ಉದ್ಯೋಗಖಾತ್ರಿಯ ಕೂಲಿ ಹಣವನ್ನು ಅವರ ಖಾತೆಗೆ ಜಮಾ ಮಾಡಿ ಕರ್ತವ್ಯಲೋಪ ಎಸಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯ್ತಿ ಸದಸ್ಯ ಕಂಠಿ ವೀರೇಶ್ ಮೇಲಾಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ ಆಗ್ರಹಿಸಿದ್ದಾರೆ.

ಮುದೇನೂರು ಗ್ರಾಮದ ಪಿ. ಹುಸೇನಾಬೀ ಕೋಂ ಫಕ್ಕೀರಸಾಬ್ ಕಳೆದ 2019 ರಲ್ಲಿಯೇ ಮರಣ ಹೊಂದಿದ್ದು, ಬಚ್ಚಲಗುಂಡಿ ಕಾಮಗಾರಿಯಲ್ಲಿ 14.9.2020 ರಿಂದ 18 ರವರೆಗೆ ಕೂಲಿ ಕೆಲಸಕ್ಕೆ ಬಂದಿದ್ದಾರೆಂದು ಹಾಜರಿ ಹಾಕಿ ಕೂಲಿ ಹಣವನ್ನು 2,850, ಸಾಮಗ್ರಿ ವೆಚ್ಚ 9,427 ರೂಪಾಯಿ ಮೊತ್ತವನ್ನು ಸೋಗಿಯ ಗ್ರಾಮೀಣ ಬ್ಯಾಂಕಿನ ಖಾತೆಗೆ ಜಮಾ ಮಾಡಲಾಗಿದೆ.

ಈ ಹಿಂದೆ ತಾವು ಸದರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದಾಗ ಇದೇ ರೀತಿ ಪ್ರಮಾದವನ್ನು ಎಸಗಿದ್ದ ಅಂದಿನ ಗ್ರಾಮ ಪಂಚಾಯ್ತಿ ಪಿಡಿಓ ಮತ್ತು ನಾನು ಸಹಿ ಮಾಡಿದ್ದರಿಂದ ನಮ್ಮ ಮೇಲೆ ಪ್ರಕರಣವನ್ನು ದಾಖಲಿಸಲಾಗಿತ್ತು. ತಾಲ್ಲೂಕು ಪಂಚಾಯ್ತಿ ಇ.ಓ. ಸೋಮಶೇಖರ್ ಎರಡನೇ ರುಜುವನ್ನು ಮಾಡಿದ್ದಾರೆ. ಹಾಗಾಗಿ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ವೀರೇಶ್ ಒತ್ತಾಯಿಸಿದ್ದಾರೆ.

error: Content is protected !!