ರಾಂಪುರ, ಫೆ. 4 – ಕಳೆದ ಜನವರಿ 26 ರಂದು ದೆಹಲಿಯಲ್ಲಿ ನಡೆದ ಪರೇಡ್ನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬದವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಭೇಟಿ ಮಾಡಿದ್ದಾರೆ. ರೈತರನ್ನು ಉಗ್ರರೆಂದು ಬಿಂಬಿಸುವುದು ಹಾಗೂ ಪ್ರತಿಭಟನೆಯನ್ನು ರಾಜಕೀಯ ಸಂಚೆಂದು ಹೇಳುವುದನ್ನು ಬಿಟ್ಟು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
27 ವರ್ಷದ ನವರೀತ್ ಸಿಂಗ್ ಪರೇಡ್ನಲ್ಲಿ ಮೃತಪಟ್ಟಿದ್ದರು. ಅವರ ಕುಟುಂಬದವರನ್ನು ಉತ್ತರ ಪ್ರದೇಶದ ರಾಮಪುರ ಜಿಲ್ಲೆಯ ದಿಬ್ದಿಬಾ ಹಳ್ಳಿಯಲ್ಲಿ ಭೇಟಿ ಮಾಡಿದ ಪ್ರಿಯಾಂಕಾ, ಕುಟುಂಬದವರು ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲೂ ಭಾಗಿಯಾದರು.
ರೈತರ ಪ್ರತಿಭಟನೆ ಸಮಯದಲ್ಲಿ ಟ್ರ್ಯಾಕ್ಟರ್ ಉರುಳಿ ಸಿಂಗ್ ಸಾವನ್ನಪ್ಪಿದ್ದರು. ಆಸ್ಟ್ರೇಲಿಯಾದಲ್ಲಿದ್ದ ಸಿಂಗ್, ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಪರೇಡ್ಗೆ ತೆರಳಿದ್ದರು.
ಕುಟುಂಬದವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಇದು ರಾಜಕೀಯದ ಮಾತನಾಡುವ ಸಮಯವಲ್ಲ. ಆದರೆ, ನಾವು ದೌರ್ಜನ್ಯ ಸಹಿಸುವುದಿಲ್ಲ. ಇದು ರಾಜಕೀಯ ಪ್ರತಿಭಟನೆಯಲ್ಲ, ರೈತರ ನಿಜವಾದ ಪ್ರತಿಭಟನೆ ಎಂದು ಹೇಳಿದರು.